ಪಿಯುಸಿ ವಿದ್ಯಾರ್ಥಿಗೆ ವಂಚನೆ
ದಾವಣಗೆರೆ, ಜು.15- ಬಹುಮಾನವಾಗಿ ಕಾರಿನ ಆಸೆ ತೋರಿಸಿ ಪಿಯುಸಿ ವಿದ್ಯಾರ್ಥಿಯೋರ್ವನಿಗೆ ನಂಬಿಸಿ ಆನ್ಲೈನ್ ಮುಖಾಂತರ ಅಪರಿಚಿತನು 99 ಸಾವಿರ ರೂ. ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊನ್ನಾಳಿ ತಾಲ್ಲೂಕು ಹಿರೇಬಾಸೂರು ಗ್ರಾಮದ ಪಿ.ಹೆಚ್. ರಂಗನಾಥ ವಂಚನೆಗೊಳ ಗಾದ ವಿದ್ಯಾರ್ಥಿ. ಇದೇ ದಿನಾಂಕ 7ರಂದು ವಿದ್ಯಾರ್ಥಿ ಮೊಬೈಲ್ ನಂಬರ್ಗೆ ಸಂಪರ್ಕಿಸಿದ ಅಪರಿಚಿತನು ಹಿಂದಿ ಭಾಷೆಯಲ್ಲಿ ಮಾತನಾಡಿ, ತಾನು ಆನ್ಲೈನ್ ಶಾಪಿಂಗ್ ಕಂಪನಿಯ ಏಜೆಂಟ್ ಎಂಬುದಾಗಿ ಪರಿಚಿತನಾಗಿದ್ದು, ನಿಮ್ಮ ಮೊಬೈಲ್ ನಂಬರ್ಗೆ 2ನೇ ಬಹುಮಾನವಾಗಿ ಸ್ವಿಫ್ಟ್ ಡಿಸೈರ್ ಕಾರು ಬಂದಿರುವುದಾಗಿ ನಂಬಿಸಿದ್ದಾನೆ.
ಅಲ್ಲದೇ, ಕಾರು ಬೇಡವೆಂದರೆ 8 ಲಕ್ಷದ 20 ಸಾವಿರ ಹಣ ಪಡೆಯಬಹುದು ಬಹುಮಾನದ ಹಣವನ್ನು ಪಡೆಯಲು ಕೆಲ ತೆರಿಗೆ ಹಣವನ್ನು ಕಟ್ಟಬೇಕಾಗಲಿದೆ ಎಂದು ತಿಳಿಸಿ, ತನ್ನ ಮೊಬೈಲ್ನಲ್ಲಿರುವ ವಾಟ್ಸಾಪ್ಗೆ ಬ್ಯಾಂಕ್ ಖಾತೆಯ ವಿವರ ಕಳುಹಿಸುವಂತೆ ತಿಳಿಸಿದ್ದು, ಅದರಂತೆಯೇ ಈ ವಿದ್ಯಾರ್ಥಿ 28,700 ರೂ. ಹಣ ವರ್ಗಾಯಿಸಿ, ಅಪರಿಚಿತನಿಗೆ ಕರೆ ಮಾಡಿ ತಿಳಿಸಿದ್ದಾನೆ. ಇದಾದ ಬಳಿಕ ಶಿವಾನಿ ಎಂಬ ಅಪರಿಚಿತ ಮಹಿಳೆ ಸಹ ವಿದ್ಯಾರ್ಥಿಯ ಮೊಬೈಲ್ಗೆ ಕರೆ ಮಾಡಿ ಆರ್ಬಿಐ ಚಾರ್ಜ್ಗಾಗಿ 49,900 ಹಣವನ್ನು ಗೂಗಲ್ ಪೇ ಮುಖೇನ ಖಾತೆಗೆ ವರ್ಗಾಯಿಸುವಂತೆ ತಿಳಿಸಿದಾಗಲೂ ಈ ವಿದ್ಯಾರ್ಥಿ ಅದರಂತೆಯೇ ಹಣ ಕಳುಹಿಸಿ ದ್ದಾನೆ. ನಂತರವೂ ಎನ್ಓಸಿಗಾಗಿ ಹಣ ಕಳುಹಿ ಸಲು ಅಪರಿಚಿತರು ಕರೆ ಮಾಡಿದಾಗ ಅನುಮಾನ ಬಂದು ಈ ವಿದ್ಯಾರ್ಥಿ ತನ್ನ ಬಳಿ ಹಣ ಇಲ್ಲ, ವರ್ಗಾವಣೆ ಮಾಡಿರುವ ಹಣವನ್ನು ವಾಪಸ್ ಕೊಡಿ ಎಂದು ಕೇಳಿದ್ದಾನೆ. ಕೊನೆಗೆ ಬಹುಮಾನ ವಾಗಿ ಕಾರು ಅಥವಾ ಹಣ ನೀಡು ವುದಾಗಿ ನಂಬಿಸಿ ಹಂತ ಹಂತವಾಗಿ ವಂಚಿಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಅಪರಾಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.