ಪಾಲಿಕೆಯಿಂದ ಬಿಗಿ ಕ್ರಮ: ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

ದಾವಣಗೆರೆ, ಏ.21- ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಯನ್ನು ತಡೆಗಟ್ಟಲು ದಾವಣಗೆರೆ ಮಹಾನಗರ ಪಾಲಿಕೆ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಅಗತ್ಯವಿದ್ದರೆ ಮಾತ್ರ ಸಾರ್ವಜನಿಕರು ಪಾಲಿಕೆಗೆ ಆಗಮಿಸುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಬಿಗಿ ಕ್ರಮದ ನಿಟ್ಟಿನಲ್ಲಿ ಪಾಲಿಕೆಯ ಎಲ್ಲಾ ಒಳ ಬರುವ ಮತ್ತು ಹೊರ ಹೋಗುವ ಬಾಗಿಲುಗಳನ್ನು ಬಂದ್ ಮಾಡಿ, ಕೇವಲ ಮುಂಭಾಗದ ಮುಖ್ಯದ್ವಾರವನ್ನು ಮಾತ್ರ ತೆರೆಯಲಾಗಿತ್ತು. ಗುಂಪಾಗಿ ಜನರು ಒಳಹೋಗದಂತೆ ತಡೆಗಟ್ಟಲು ಬ್ಯಾರಿಕೇಡ್‍ಗಳನ್ನು ಹಾಕಲಾಗಿತ್ತು.

ಪಾಲಿಕೆಗೆ ಆಗಮಿಸುವ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುತ್ತಿತ್ತು. ಅಲ್ಲದೇ ಸೋಂಕು ನಿವಾರಕ ದ್ರಾವಣವನ್ನು ಹಾಕಲಾಗುತ್ತಿತ್ತು. ಇದಕ್ಕಾಗಿ ಪಾಲಿಕೆ ಪ್ರತ್ಯೇಕವಾಗಿ ಇಬ್ಬರು ಸಿಬ್ಬಂದಿಗಳನ್ನು ನೇಮಿಸಿದೆ. ಒಬ್ಬರು ಬರುವ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದರೆ, ಮತ್ತೊಬ್ಬರು ಸ್ಯಾನಿಟೈಜರ್ ಹಾಕುತ್ತಿದ್ದರು. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಸೂಚನೆ ನೀಡುತ್ತಿದ್ದರು.

ಇದಲ್ಲದೇ ಅನಾವಶ್ಯಕವಾಗಿ ಪಾಲಿಕೆಗೆ ಬರುತ್ತಿದ್ದ ಸಾರ್ವಜನಿಕರನ್ನು ಯಾವುದೇ ಕಾರಣಕ್ಕೂ ಸಿಬ್ಬಂದಿಗಳು ಒಳ ಬಿಡಲಿಲ್ಲ. ತುರ್ತು ಮತ್ತು ಅಗತ್ಯ ಕೆಲಸಗಳಿದ್ದರೆ ಮಾತ್ರ ಸಂಬಂಧಪಟ್ಟ ವಿಭಾಗಕ್ಕೆ ಮಾತ್ರ ಹೋಗಿ ಬರುವಂತೆ ತಾಕೀತು ಮಾಡಿ ಒಳಗೆ ಬಿಡುತ್ತಿದ್ದರು. ಇದರಿಂದಾಗಿ ಪಾಲಿಕೆ ಆವರಣದಲ್ಲಿ ಸಾರ್ವಜನಿಕರ ಓಡಾಟ ವಿರಳವಾಗಿತ್ತು.

ಆದರೆ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೆ ಹಲವಾರು ಬಾರಿ ಪಾಲಿಕೆಗೆ ಅಲೆದಾಟ ನಡೆಸಬೇಕು. ಇದೀಗ ಕೊರೊನಾ ನೆಪದಲ್ಲಿ ನಮ್ಮನ್ನು ಪಾಲಿಕೆ ಒಳಗೆ ಬಿಡುತ್ತಿಲ್ಲ. ಹೀಗಾದರೆ ನಮ್ಮ ಕೆಲಸಗಳನ್ನು ಹೇಗೆ ಮಾಡಿಸಿಕೊಳ್ಳುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಕೊರೊನಾ ರೋಗ ಒಬ್ಬರಿಂದ ಒಬ್ಬರಿಗೆ ಹರಡದಂತೆ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದು ಸಮಾಧಾನದ ಸಂಗತಿಯೇ ಸರಿ ಎನ್ನುವುದು ಬಹುತೇಕ ಸಾರ್ವಜನಿಕರ ಅಭಿಪ್ರಾಯ.

error: Content is protected !!