ಜಗಳೂರು ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ
ಜಗಳೂರು, ಫೆ.22- ಪರಿಶಿಷ್ಟ ವರ್ಗಗಳ ಕಲ್ಯಾಣ ಅಭಿವೃದ್ಧಿಗಾಗಿ ಸರಕಾರ ಜಾರಿಗೊಳಿಸಿರುವ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ ಕರೆ ನೀಡಿದರು.
ಪಟ್ಟಣದ ನೆಹರು ರಸ್ತೆಯ ಮೊಹರಂ ಮಸೀದಿ ಆವರಣದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಹಾಗೂ ವಾಲ್ಮೀಕಿ ಸ್ವಾಭಿಮಾನಿ ಸಂಘ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ `ಅರಿವು ಮತ್ತು ಜಾಗೃತಿ 2020-21′ ಕಾರ್ಯಕ್ರಮದಡಿ ಕಿರುಹೊತ್ತಿಗೆ ಬಿಡುಗಡೆ ಮಾಡಿ ನಂತರ ಅವರು ಮಾತನಾಡಿದರು.
ವಾಲ್ಮೀಕಿ ಸಮಾಜ ಹಕ್ಕುಗಳಿಂದ ಮುಖ್ಯವಾಹಿನಿಗೆ ಬರಲು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಹಾಗೂ ಎಲ್.ಜಿ.ಹಾವನೂರು ಅವರ ಮೀಸಲಾತಿ ಹೋರಾಟವನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಹಾಗೂ ಶಾಸಕ ಎಸ್.ವಿ.ರಾಮಚಂದ್ರ ಅವರು ಸಚಿವ ಸ್ಥಾನದ ಆಸೆ ತೊರೆದು ತಾಲ್ಲೂಕಿಗೆ ಸೂರು, ನೀರು, ಕಲ್ಪಿಸಲು ಸರ್ಕಾರಕ್ಕೆ ಒತ್ತಾಯಿಸಿದ ಫಲ ವಾಗಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳು ಸಾಕಾರಗೊಂಡಿವೆ. ಕೆಲವೇ ವರ್ಷಗಳಲ್ಲಿ ಜಗಳೂರು ತಾಲ್ಲೂಕಿನ ಬರ ನಶಿಸಿ ಹೋಗಿ ಹಸಿರು ನಾಡಾಗಿ ಕಂಗೊಳಿಸುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಸಾವಿರ ಜನಸಂಖ್ಯೆಗೆ ಆಸನ ವ್ಯವಸ್ಥೆಯಿರುವ ವಾಲ್ಮೀಕಿ ಭವನ ಸೇರಿದಂತೆ ಅನೇಕ ಕಲ್ಯಾಣ ಕಾರ್ಯಕ್ರಮನ್ನು ಸಮಾಜದವರು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ ಮಾತನಾಡಿ, ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಸಮುದಾಯವಿರುವ ವಾಲ್ಮೀಕಿ ಸಮಾಜದವರು ಅಭಿವೃದ್ಧಿ ಹಾಗೂ ಸಬಲೀಕರಣಕ್ಕಾಗಿ ಪ.ವರ್ಗಗಳ ಕಲ್ಯಾಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಗಳನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರವೇ ಭದ್ರತೆ ಒದಗಿಸಿ ನಿಗಮದಿಂದ ಶೇ.75 ರಷ್ಟು ಸಬ್ಸಿಡಿ ದರದಲ್ಲಿ 10 ಕೋಟಿವರೆಗೂ ಸಾಲ ಸೌಲಭ್ಯಗಳಿವೆ. ಅಲ್ಲದೇ ಇನ್ನೂ ಅನೇಕ ಸೌಲಭ್ಯಗಳಿದ್ದು, ವಿನಾಕಾರಣ ಆಡಳಿತ ಸರ್ಕಾರಗಳನ್ನು ದೂಷಿಸದೆ ಅನುಷ್ಠಾನವಾಗುವ ಯೋಜನೆಗಳನ್ನು ಪ್ರಶ್ನಿಸಿ, ಸದ್ಬಳಕೆಗೆ ಮಾಡಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ, ಪ.ವರ್ಗಗಳ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ ಮಾತನಾಡಿ, ಪ.ವರ್ಗಗಳ ಕಲ್ಯಾಣ ಇಲಾಖೆಯಿಂದ ಗಂಗಾ ಕಲ್ಯಾಣ ಯೋಜನೆ ಒಳಗೊಂಡಂತೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ ಹಾಗೂ ಪಟ್ಟಣದಲ್ಲಿ ಹಾಸ್ಟೆಲ್ ಸೌಲಭ್ಯಗಳಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ ಪಡೆದುಕೊಂಡು ಮಕ್ಕಳ ಭವಿಷ್ಯ ರೂಪಿಸಿ ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ಪರಿಶಿಷ್ಟ ಪ.ವರ್ಗಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ತಲಾ ಒಂದು ವಿದ್ಯಾರ್ಥಿ ನಿಲಯಗಳ ಅವಶ್ಯಕತೆ ಇದ್ದು, ಮಂಜೂ ರಾತಿ ಮಾಡಿಸಬೇಕು ಎಂದು ಮನವಿ ಮಾಡಿದರು.
ಶ್ರೀ ವಾಲ್ಮೀಕಿ ಕಲಾತಂಡದಿಂದ ಜಾಗೃತಿ ಗೀತೆಗಳ ಮೂಲಕ ಇಲಾಖೆಯ ಕಾರ್ಯಕ್ರಮಗಳ ಕುರಿತು ಜನಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ನಿಜಲಿಂಗಪ್ಪ, ಪ.ಪಂ ಸದಸ್ಯರಾದ ಮೊಹಮದ್, ಪಾಪಲಿಂಗಪ್ಪ, ನಾಯಕ ಸಮಾಜದ ಕಾರ್ಯದರ್ಶಿ ಸೂರಲಿಂಗಪ್ಪ ಹಾಗೂ ಮುಖಂಡರಾದ ರವಿ, ಓಬಳೇಶ್, ಶಿವಣ್ಣ, ಪ್ರಕಾಶ್ ಸೇರಿದಂತೆ ಭಾಗವಹಿಸಿದ್ದರು.