ಹರಿಹರ, ಏ.21- ನಗರದ ಹಳೆ ಪಿ.ಬಿ. ರಸ್ತೆಯಲ್ಲಿರುವ ನಂದಾ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಮೇಲೆ ಉದ್ರಿ ಡೀಸೆಲ್ ಹಾಕುವ ವಿಚಾರಕ್ಕೆ ವಾಹನದ ಮಾಲೀಕ ಹಲ್ಲೆ ಮಾಡಿದ ಘಟನೆ ನೆಡೆದಿದೆ.
ನಗರದ ಹಳೆ ಪಿ.ಬಿ ರಸ್ತೆಯ ನಂದಾ ಪೆಟ್ರೋಲ್ ಬಂಕ್‌ನಲ್ಲಿ ಸಂಜೆ ಅಬ್ರಾರ್ ಎಂಬುವವರ ವಾಹನದ ಚಾಲಕ ನಂದಾ ಪೆಟ್ರೋಲ್ ಬಂಕ್‌ಗೆ ಹೋಗಿ ನಮ್ಮ ಮಾಲೀ ಕರಾದ ಅಬ್ರಾರ್ ಹೇಳಿದ್ದಾರೆ ಉದ್ರಿ ಡೀಸೆಲ್ ಹಾಕುವಂತೆ ಪೆಟ್ರೋಲ್ ಬಂಕ್ ಕೆಲಸಗಾರ ನಾಗರಾಜ್ ಎಂಬುವವರಿಗೆ ಹೇಳಿದ್ದಾರೆ. ಆಗ ನಾಗರಾಜ್, ನಮ್ಮ ಮಾಲೀಕರು ನಿಮಗೆ ಉದ್ರಿ ಹಾಕಬೇಡಿ ಎಂದು ತಿಳಿಸಿದ್ದಾರೆ. ಆದ್ದರಿಂದ ನಾನು ಡೀಸೆಲ್ ಹಾಕುವುದಿಲ್ಲ ಎಂದು ತಿಳಿಸಿದ್ದಾರೆ. ಆಗ ವಾಹನ ಚಾಲಕ ತಮ್ಮ ವಾಹನ ಮಾಲೀಕ ಅಬ್ರಾರ್ ಎಂಬುವವರಿಗೆ ದೂರವಾಣಿ ಕರೆ ಮಾಡಿ ವಿಷಯ ಅವರ ಗಮನಕ್ಕೆ ತಂದಿದ್ದಾರೆ.
ಆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ವಾಹನ ಮಾಲೀಕ ಅಬ್ರಾರ್, ನಾಗರಾಜ್ ಬಳಿ ಮಾತನಾಡುತ್ತಾ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿದಾಗ ವಾಹನ ಮಾಲೀಕ ಅಬ್ರಾರ್ ನಾಗರಾಜ್ ಮತ್ತು ಹನುಮಂತ ಎಂಬುವವರ ಮೇಲೆ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದು, ಇದರಿಂದಾಗಿ ನಾಗರಾಜ್ ಮತ್ತು ಹನುಮಂತ ಎಂಬುವವರಿಗೆ ಕುತ್ತಿಗೆಗೆ ಗಾಯವಾಗಿದ್ದು, ಹಲ್ಲೆ ಮಾಡಿದ ವಿಚಾರವನ್ನು ನಾಗರಾಜ್ ಪೆಟ್ರೋಲ್ ಬಂಕ್ ಮಾಲೀಕರ ಗಮನಕ್ಕೆ ತಂದಿದ್ದಾರೆ.
ಆ ನಂತರದಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ನಂತರದಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನಾಗರಾಜ್ ಮತ್ತು ಹನುಮಂತರವರನ್ನು ವಶಕ್ಕೆ ಪಡೆದುಕೊಂಡು ಆರೋಗ್ಯ ತಪಾಸಣೆ ಮಾಡಿಸಿದರು.
ಸ್ಥಳಕ್ಕೆ ನಗರ ಠಾಣೆಯ ಐಪಿಎಸ್ ಬಸವರಾಜ್ ತೆಲಿ ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಇರುವ ಸಿ.ಸಿ. ಕ್ಯಾಮರಾದಲ್ಲಿ ಘಟನೆ ಬಗ್ಗೆ ನೋಡಿದಾಗ ವಾಹನ ಮಾಲೀಕ ತಪ್ಪಾಗಿ ನಡೆದುಕೊಂಡಿರುವುದು ಸಿ.ಸಿ. ಕ್ಯಾಮರಾದಲ್ಲಿ ಕಂಡುಬಂದಿದೆ. ಅವರ ಮೇಲೆ ಮುಂದಿನ ಕ್ರಮಗಳನ್ನು ಜರುಗಿಸುವುದಾಗಿ ತಿಳಿಸಿದ್ದಾರೆ.