ಹಾವೇರಿ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆ: ಮತದಾರರ ಇಂಗಿತ
ರಾಣೇಬೆನ್ನೂರು, ಏ.22- ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡು ಸಾಕಷ್ಟು ಸೇವೆ ಸಲ್ಲಿಸಿರುವ, ಸಮಾನ ಮನಸ್ಕರೇ ಆಕಾಂಕ್ಷಿಗಳಾಗಿದ್ದೇವೆ ಎಂದು ಕಸಾಪ ಜಿಲ್ಲಾಧ್ಯಕ್ಷರ ಚುನಾವಣಾ ಅಭ್ಯರ್ಥಿ ಪ್ರಭುಲಿಂಗಪ್ಪ ಹಲಗೇರಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ಲಿಂಗಯ್ಯ ಹಾಗೂ ಮಾರುತಿ ಈ ಇಬ್ಬರೂ ಸ್ಪರ್ಧಿಗಳು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವ ಇಂಗಿತ ಕ್ಷೇತ್ರದ ಮತದಾರರದ್ದಾಗಿದೆ. ನನ್ನ ಹಿರಿಯ ಸಹೋದರ ರಂತಿರುವ ಈಡಿಗೇರ ಅವರು ಸ್ಪರ್ಧಿಗಳಾಗಿದ್ದರೂ ಸಹ, ಸಾಹಿತಿಗಳ ಒಲವು ನನ್ನ ಪರವಾಗಿದೆ ಎಂದು ಪ್ರಭುಲಿಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.
86ನೇ ಸಾಹಿತ್ಯ ಸಮ್ಮೇಳನವನ್ನು ಹಾವೇರಿ ನಗರದಲ್ಲಿಯೇ ಅರ್ಥಪೂರ್ಣವಾಗಿ, ಜನರ ಮನದಲ್ಲಿ ಉಳಿಯುವಂತೆ ಆಚರಿಸಲಾಗುವುದು. ನಾಮಕರಣದ ಮೂಲಕ ಸಾಹಿತಿಗಳ, ಸಂಶೋಧಕರ ಹೆಸರುಗಳನ್ನು ಸ್ಮರಣೆಯಲ್ಲಿಡುವ ಹೆಳವನಕಟ್ಟೆ ಗಿರಿಯಮ್ಮ, ಗಳಗನಾಥ ಪ್ರಶಸ್ತಿ, ದತ್ತಿ ನಿಧಿ ಸ್ಥಾಪನೆ, ಜಿಲ್ಲಾ ಸಾಹಿತ್ಯ ಭವನ, ನಿರ್ಮಾಣ, ಗ್ರಾಮೀಣ ಭಾಗದಲ್ಲಿ ಘಟಕಗಳ ರಚನೆಯೊಂದಿಗೆ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ, ಜಿಲ್ಲಾ ತಾಲ್ಲೂಕು ಸಮ್ಮೇಳನಗಳ ಆಯೋಜನೆಗೆ ಒತ್ತು ಮುಂತಾದವುಗಳ ಪ್ರಣಾಳಿಕೆ ಜೊತೆಗೆ, ತಾವು ಮಾಡಿದ ಇದುವರೆಗಿನ ಸಾಹಿತ್ಯ ಸೇವೆಯ ಬಗ್ಗೆ ಪ್ರಭುಲಿಂಗಪ್ಪ ವಿವರಿಸಿದರು.
ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲೇಶಣ್ಣ ಅರಕೇರಿ, ವೀರಶೈವ ಮಹಾಸಭಾದ ಚಂದ್ರಣ್ಣ ಸೊಪ್ಪಿನ, ನಗರಸಭೆ ಸದಸ್ಯೆ ಗಂಗಮ್ಮ ಹಾವನೂರ, ನಗರಸಭೆ ಮಾಜಿ ಅಧ್ಯಕ್ಷೆ ರತ್ನ ಪುನೀತ, ಕಸಾಪ ಮಾಜಿ ಅಧ್ಯಕ್ಷ ಜಿ.ಬಿ. ಮಾಸಣಗಿ, ಕಾಂಗ್ರೆಸ್ನ ಎ.ಎಂ. ನಾಯಕ, ಬಿಜೆಪಿಯ ಜಯಣ್ಣ ಕರಡೇರ್ ಹಾಗೂ ಲಯನ್, ಜೇಸಿ ಪ್ರತಿನಿಧಿಗಳು ಗೋಷ್ಠಿಯಲ್ಲಿದ್ದರು.