ದಸಂಸ ಹೆಸರು ಬಳಕೆ ಪ್ರಕರಣದ ತೀರ್ಪು ನೀಡಿದ ನ್ಯಾಯಾಲಯ : ಸ್ವಾಗತಾರ್ಹ

ದಸಂಸ ಹೆಸರು ಬಳಕೆ ಪ್ರಕರಣದ ತೀರ್ಪು ನೀಡಿದ ನ್ಯಾಯಾಲಯ : ಸ್ವಾಗತಾರ್ಹ - Janathavaniಹರಿಹರ, ಏ.22- ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರು ಬಳಕೆ ಪ್ರಕರಣದಲ್ಲಿ ಭದ್ರಾವತಿ ಹಿರಿಯ ಸಿವಿಲ್ ಕೋರ್ಟ್ ನೀಡಿರುವ ತೀರ್ಪನ್ನು ದಸಂಸ (ಪ್ರೊ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಶಾಖೆ ಸ್ವಾಗತಿಸಿದೆ.

1974ರಲ್ಲಿ ದಸಂಸಯನ್ನು ಹರಿಹರದವರೇ ಆದ ಪ್ರೊ.ಬಿ.ಕೃಷ್ಣಪ್ಪರ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. 1975ರಲ್ಲಿ ನೋಂದಾಯಿ ಸಲಾಗಿತ್ತು. 2008ರಲ್ಲಿ  ಭದ್ರಾವತಿ ಸತ್ಯ, ವೆಂಕಟಗಿರಿ ಹಾಗೂ ಇತರರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ಸಲ್ಲಿಸಿ, ದಸಂಸ ಎಂಬುದು ನಮ್ಮ ಸಮಿತಿಯಾಗಿದೆ. ಎಂ.ಗುರುಮೂರ್ತಿ ಅವರ ಹೆಸರಿನಲ್ಲಿ ಇಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ್ದರು.

ನಂತರ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ನಂತರ ಇದೇ ಮಾ.24 ರಂದು ತೀರ್ಪು ನೀಡಿರುವ ಕೋರ್ಟ್ ಎಂ.ಗುರುಮೂರ್ತಿ ನೇತೃತ್ವದ ಬಣವೇ ನೈಜ ಸಮಿತಿಯಾಗಿದೆ ಎಂದು ಸ್ಪಷ್ಟಪಡಿಸಿದೆ ಎಂದು ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ತಿಳಿಸಿದ್ದಾರೆ.

ಇತರರು ಹೆಸರು ಬಳಸುವಂತಿಲ್ಲ : ಇನ್ನು ಮುಂದೆ 47/74-75 ನೋಂದಣಿ ಸಂಖ್ಯೆ ಹೊಂದಿರುವ ಎಂ.ಗುರುಮೂರ್ತಿ ಬಣ ಬಿಟ್ಟು ಬೇರೆ ಯಾವ ಸಮಿತಿಯವರೂ ದಸಂಸ ಹೆಸರು ಬಳಸುವಂತಿಲ್ಲ. ಇದರ ಹೆಸರಿನಲ್ಲಿ ಸಮಾವೇಶ ನಡೆಸುವುದು, ಪತ್ರ ವ್ಯವಹಾರ ಮಾಡುವುದು, ಸಾಮಾನ್ಯ ಸಭೆ ಕರೆಯುವುದು ಕಾನೂನು ಬಾಹಿರವಾಗಿದೆ.

ಆದಾಗ್ಯೂ ಈಗಾಗಲೇ ವಿವಿಧ ದಸಂಸ ಬಣ ಗಳಿದ್ದು ಅವರು ಲೆಟರ್‍ಹೆಡ್ ಇನ್ನು ಮುಂದೆಯೂ ಬಳಸಿದಲ್ಲಿ, ಹೇಳಿಕೆಗಳನ್ನು ನೀಡಿದಲ್ಲಿ, ಸಮಾವೇಶ ಇತ್ಯಾದಿ ಮಾಡುವುದು ಅಪರಾಧವಾಗಿರುತ್ತದೆ. 

ಈಗಾಗಲೇ ಕೆಲವರು ತಮ್ಮ ಅನಿವಾರ್ಯ ಕಾರಣಗಳಿಗೆ ದಸಂಸ ಹೆಸರಿನಲ್ಲಿ ಹಲವು ಬಣ ಸ್ಥಾಪಿಸಿದ್ದರು. ಆದರೀಗ
ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಸಂಘಟನೆಯೇ ಅಧಿಕೃತವಾಗಿದ್ದು, ಎಂ.ಗುರುಮೂರ್ತಿ ನೇತೃತ್ವದಲ್ಲಿಯೇ ಸಮಿತಿ ಮುಂದುವರೆಯಲಿದೆ. ಇದು ಪ್ರೊ.ಬಿ.ಕೃಷ್ಣಪ್ಪರ ಚಿಂತನೆ, ಹೋರಾಟಗಳಿಗೆ ಸಿಕ್ಕ ಜಯವಾಗಿದೆ ಎಂದರು.

ಕೃಷ್ಣಪ್ಪ ಸಮಾಧಿಗೆ ಗುರುಮೂರ್ತಿ ಭೇಟಿ : ಸುದೀರ್ಘ ಹೋರಾಟದ ನಂತರ ಕೋರ್ಟ್‍ನಲ್ಲಿ ಸಿಕ್ಕ ಜಯದ ಹಿನ್ನೆಲೆಯಲ್ಲಿ  ನಾಳೆ ದಿನಾಂಕ 23 ರ ಶುಕ್ರವಾರ ಬೆಳಿಗ್ಗೆ 9.30ಕ್ಕೆ ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅವರು ತಮ್ಮ ಸಂಗಡಿಗರೊಂದಿಗೆ ಹನಗವಾಡಿ ಸಮೀಪದ ಮೈತ್ರಿವನದ ಪ್ರೊ.ಬಿ.ಕೃಷ್ಣಪ್ಪರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡಲಿದ್ದಾರೆ. ಕಾಯಕರ್ತರು ಕೋವಿಡ್ ನಿಯಮ ಪಾಲನೆಯೊಂದಿಗೆ ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.

error: Content is protected !!