ದಾವಣಗೆರೆ, ಏ. 22- ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಪರಿಷತ್ತಿನ ಶ್ರೇಯೋಭಿವೃದ್ಧಿಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅರಿವಿರುವ ಯುವ ನೇತಾರರು ನೇತೃತ್ವ ವಹಿಸಿಕೊಂಡಲ್ಲಿ ಸಮಾಜದಲ್ಲಿ ಹೊಸ ಬದಲಾವಣೆ ತರಲು ಸಾಧ್ಯ ಎಂದು ಹಿರಿಯ ಮುತ್ಸದ್ಧಿಗಳು ಅಭಿಪ್ರಾಯಪಟ್ಟರು.
ಸ್ಥಳೀಯ ವಿದ್ಯಾನಗರದ ಶ್ರೀ ಈಶ್ವರ – ಪಾರ್ವತಿ ದೇವಸ್ಥಾನದ ಬಳಿ ಇಂದು ನಡೆದ ಚಹಾ ಕೂಟದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಸಾಪ ಚುನಾವಣಾ ಅಭ್ಯರ್ಥಿ ಆರ್. ಶಿವಕುಮಾರಸ್ವಾಮಿ ಕುರ್ಕಿ ಅವರ ಪರಿಚಯ ಪತ್ರ ಹಾಗೂ ಶರಣ ಸಂಸ್ಕೃತಿ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಶಿವಕುಮಾರಸ್ವಾಮಿ ಕುರ್ಕಿ ಅವರಿಗೆ ಶುಭ ಹಾರೈಸಲಾಯಿತು. ಇದೇ ಸಂದ ರ್ಭದಲ್ಲಿ ತಮ್ಮನ್ನು ಜಿಲ್ಲಾ ಕಸಾಪ ಅಧ್ಯಕ್ಷತೆಗೆ ಆಯ್ಕೆ ಮಾಡುವಂತೆ ಶಿವಕುಮಾರಸ್ವಾಮಿ ಕೇಳಿಕೊಂಡರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಉಪ ಮಹಾಪೌರರಾದ ಬೆಳವನೂರು ನಾಗರಾಜಪ್ಪ, ಮಾಜಿ ಮಹಾಪೌರರಾದ ಕೆ.ಆರ್.ವಸಂತಕುಮಾರ್, ಸಮಾಜದ ಮುಖಂಡರುಗಳಾದ ತೆಲಗಿ ರುದ್ರೇಶಪ್ಪ, ಸಿದ್ದನೂರು ಎಸ್.ಎಂ.ಮಹೇಶ್ವರಯ್ಯ, ಡಿ.ಜಿ.ಸುಭಾಷ್, ಎನ್.ಜಿ. ಪುಟ್ಟಸ್ವಾಮಿ, ಬಾಲಚಂದ್ರಪ್ಪ ಮುದಗುಂಡಿ, ಯುವ ಮುಖಂಡರಾದ ಕೋಗಲೂರು ಎಸ್.ಬಿ.ಶಿವಕುಮಾರ್, ಕಂದಗಲ್ಲು ಸತೀಶ್ ಪಾಟೀಲ್, ಕಲ್ಪನಹಳ್ಳಿ ಕೆ. ಎಸ್. ರವೀಂದ್ರನಾಥ, ಲೆಕ್ಕಪರಿಶೋಧಕ ಕುಮಾರಪ್ಪ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಅಜಿತ್ ಸೇನ್ ಮುಂತಾದವರು ಉಪಸ್ಥಿತರಿದ್ದರು.