ಪಾರದರ್ಶಕ ಆಡಳಿತ, ಋಣ ತೀರಿಸುವ ಕೆಲಸ

`ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮದ ಸಮಾರೋಪದಲ್ಲಿ ಮೇಯರ್ ಅಜಯ್ ಕುಮಾರ್

ದಾವಣಗೆರೆ, ಫೆ. 20 – ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಆರಂಭಿಸಲಾಗಿದ್ದ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮದ ಮೂಲಕ ಕೇವಲ ಮತ ಕೇಳಲಷ್ಟೇ ಜನರ ಬಾಗಿಲಿಗೆ ಬರುವುದಿಲ್ಲ, ಸೇವೆ ಸಲ್ಲಿಸಲೂ ಬರುತ್ತೇವೆ ಎಂಬುದನ್ನು ತೋರಿಸಿದ್ದೇವೆ. ಮತಭಿಕ್ಷೆಯ ಋಣ ತೀರಿಸುವ ಕೆಲಸ ಮಾಡಿದ್ದೇವೆ ಎಂದು ಮೇಯರ್ ಬಿ.ಜಿ. ಅಜಯ್ ಕುಮಾರ್ ತಿಳಿಸಿದ್ದಾರೆ.

ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮನೆ ಬಾಗಿಲಿಗೆ ಮಹಾ ನಗರ ಪಾಲಿಕೆ ಕಾರ್ಯಕ್ರಮದ ಸಮಾ ರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಮೇಯರ್ ಅಂದರೆ ಕೈಗೆ ಸಿಗದ ಶಿಖರ ಅಂದುಕೊಂಡಿ ದ್ದರು. ಇವತ್ತು ನಾವು ನಿಮ್ಮಲ್ಲಿ ಒಬ್ಬರು ಎಂಬು ದನ್ನು ತೋರಿಸಿಕೊಟ್ಟಿದ್ದೇವೆ ಎಂದರು.

ಸರ್ಕಾರಿ ಕೆಲಸಗಳೆಂದರೆ ಲಂಚಕೋ ರತನ, ಕರ್ತವ್ಯದ ಕುರಿತ ಅಧಿಕಾರಿಗಳ ಅನಾ ಸಕ್ತಿ ಎಂದು ಜನರಲ್ಲಿ ಬೇಸರ ಮೂಡಿತ್ತು. ಅದನ್ನು ಹೋಗಲಾಡಿಸಿ ಪಾರದರ್ಶಕತೆ ತಂದು ಪಾಲಿಕೆ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಬೇಕೆಂದು ಈ ಕಾರ್ಯಕ್ರಮ ಮಾಡಿದೆವು ಎಂದು ಸಮರ್ಥಿಸಿಕೊಂಡರು. 

ಕಟ್ಟಡ ಅನುಮತಿಗೆ ಇಂದು ಮಧ್ಯಾಹ್ನ ಎರಡು ಗಂಟೆಗೆ ಅರ್ಜಿ ಸಲ್ಲಿಸಲಾಗಿತ್ತು. ಜಿಪಿಎಸ್ ಕೈಗೊಳ್ಳುವುದು, ಸ್ಥಳಕ್ಕೆ ಭೇಟಿ ಪೂರೈಸಿ ಸಂಜೆ 5 ಗಂಟೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಮೂರು ಗಂಟೆಯಲ್ಲೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಾಧ್ಯ ಎಂಬುದನ್ನು ಈ ಕಾರ್ಯ ಕ್ರಮ ತೋರಿಸಿದೆ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಎಸ್.ಎ. ರವೀಂದ್ರನಾಥ್, ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಎಂಬುದು ವಿನೂತನ ಕ್ರಮವಾಗಿದ್ದು, ಯಶಸ್ಸು ಕಂಡಿದೆ. ಇದನ್ನು ಇನ್ನೂ ಚೆನ್ನಾಗಿ ಮಾಡಲು ಸಾಧ್ಯವಿದ್ದು, ಅದನ್ನು ಪರಿಗಣಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಪ್ರಚಾರ ಮಾಡಿದರೂ ಜನರು ಈ ಯೋಜನೆಯ ಸದುಪಯೋಗ ಪಡಿಸಿಕೊಂಡಿಲ್ಲ. ಆದರೆ, ಈ ಯೋಜನೆ ಇಲ್ಲಿಗೇ ನಿಲ್ಲಬಾರದು. ಜನರು ಕಂದಾಯ ಕಟ್ಟುವ ಅವಧಿಯಾದ ಮಾರ್ಚ್ – ಏಪ್ರಿಲ್ ಅವಧಿಯಲ್ಲಿ ನಗರದಾದ್ಯಂತ ಇಂತಹ ಕಾರ್ಯಕ್ರಮ ನಡೆಯಬೇಕು ಎಂದರು.

ಪಾಲಿಕೆಯ ಕಾಂಗ್ರೆಸ್ ಸದಸ್ಯ ಚಮನ್ ಸಾಬ್ ಮಾತನಾಡಿ, ಕಾರ್ಯಕ್ರಮಕ್ಕೆ ಒಳ್ಳೆಯ ಕಲ್ಪನೆ ಹಾಗೂ ದೃಷ್ಟಿ ಇತ್ತು. ಆದರೆ, ಜನರಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ನೀಡುವ ಸೌಲಭ್ಯ ಇದ್ದರೂ ಯಾರೂ ಪಡೆದುಕೊಳ್ಳಲು ಮುಂದೆ ಬರಲಿಲ್ಲ. ಇದರಿಂದಾಗಿ ಕಾರ್ಯಕ್ರಮ ಅರ್ಧವಷ್ಟೇ ಯಶಸ್ವಿಯಾಗಿದೆ ಎಂದರು.

ಆದರೆ, ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಸಮರ್ಥಿಸಿಕೊಂಡ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಅಧಿಕಾರಿಗಳ ಸ್ಪಂದನೆ ಇಲ್ಲದೇ ಇದ್ದರೆ ಕೊರೊನಾ ಸಮಯದಲ್ಲೂ ಶೇ.98ರಷ್ಟು ಆಸ್ತಿ ತೆರಿಗೆ ಸಂಗ್ರಹ ಆಗಲು ಸಾಧ್ಯವಾಗುತ್ತಿರಲಿಲ್ಲ. ನೀರಿನ ಕಂದಾಯ ಸಂಗ್ರಹಣೆ ಶೇ.25ರಷ್ಟು ಹೆಚ್ಚಾಗಿದೆ. ಯೋಜನೆ ಶೇ.100ರಷ್ಟು ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್, ಶಿವಪ್ರಕಾಶ್, ನಾಮನಿರ್ದೇಶಿತ ಸದಸ್ಯರಾದ ಜಯಮ್ಮ, ರುದ್ರಗೌಡ, ಶಿವನಗೌಡ ಪಾಟೀಲ್, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಮಂಜು ಪ್ರಾರ್ಥಿಸಿದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸ್ವಾಗತಿಸಿದರು.

ಸಮಾರೋಪದಲ್ಲಿ ಟೀಕೆ – ಸಮರ್ಥನೆ

ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮಕ್ಕೆ ಅಧಿಕಾರಿಗಳ ಸ್ಪಂದನೆ ಸರಿಯಾಗಿ ಸಿಗಲಿಲ್ಲ. ತಮ್ಮ ವಾರ್ಡ್‌ನ 12 ಟ್ರೇಡ್ ಲೈಸೆನ್ಸ್ ಅರ್ಜಿಗಳ ಪೈಕಿ ಆರು ತಿಂಗಳ ಮೇಲೆ 21 ದಿನಗಳಾದರೂ ಬಗೆಹರಿದಿಲ್ಲ ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಎ. ನಾಗರಾಜ್ ಟೀಕಿಸಿದರು.

ನಂತರ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಯಕ್ರಮದ ಅವಧಿಯಲ್ಲಿ ವಾರ್ಡ್‌ಗಳು ಸ್ವಚ್ಛವಾದ ಬಗ್ಗೆ ಪ್ರತಿಪಕ್ಷಗಳ ಸದಸ್ಯರೇ ತಮ್ಮ ಬಳಿ ತಿಳಿಸಿದ್ದಾರೆ. ಸಾರ್ವಜನಿಕರೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಇಂದಿರಾಗಾಂಧಿ ಬಂದಾಗ ಗರೀಬಿ ಹಠಾವೋ ಮಾಡಿದ್ದರು. ಅದು ಎಷ್ಟರ ಮಟ್ಟಿಗೆ ಗರೀಬಿ ಹಠವೋ ಆಯಿತೋ ಗೊತ್ತಿಲ್ಲ‌. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಇಂದಿರಾ ಕ್ಯಾಂಟೀನ್ ಮಾಡಿದರು ಅದು ಎಷ್ಟರ ಮಟ್ಟಿಗೆ ಬಡವರ ಹಸಿವು ನೀಗಿಸಿತೋ ಗೊತ್ತಿಲ್ಲ. ಇವೆಲ್ಲಾ ಪ್ರಯೋಗಾತ್ಮಕ ಕಾರ್ಯಕ್ರಮಗಳು. ಟೀಕೆ ಟಿಪ್ಪಣಿಗಳಿಗೆ ಅಂಜದೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಸಾಗಬೇಕು ಎಂದು ತಿಳಿಸಿದರು.

error: Content is protected !!