ಅಸಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ನಕಲಿಗಳು
ದಾವಣಗೆರೆ, ಜು.10- ಪೊಲೀಸರ ಸೋಗಿನಲ್ಲಿ ಬಂದ ಆರೋಪಿತರು ಇಸ್ಪೀಟ್ ಜೂಜಾಡುತ್ತಿದ್ದವರಿಗೆ ಚಳ್ಳೇಹಣ್ಣು ತಿನ್ನಿಸಿ ಚಿನ್ನಾಭರಣ, ನಗದು ದರೋಡೆ ಮಾಡಿದ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ಆರ್.ರಘು ಮತ್ತು ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲ್ಲೂಕಿನ ಅಣ್ಣೇಶ್ವರ ಗ್ರಾಮದ ಆನಂದಬಾಬು ಬಂಧಿತ ಆರೋಪಿಗಳು.
ಇದೇ ದಿನಾಂಕ 3 ರಂದು ರಾತ್ರಿ 9 ಗಂಟೆಗೆ ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ಕೆರೆ ಏರಿಯ ಮೇಲೆ ಇಸ್ಪೀಟ್ ಜೂಜಾಡುತ್ತಿದ್ದಾಗ ಯಾರೋ 4-5 ಜನರು ಪೊಲೀಸರ ಸೋಗಿನಂತೆ ಬಂದು 27 ಸಾವಿರ ರೂ. ನಗದು, 5 ಗ್ರಾಂ ಚಿನ್ನಾಭರಣ, ಮೊಬೈಲ್‌ಗಳನ್ನು ಕಿತ್ತುಕೊಂಡು ಹೋಗಿರು ವುದಾಗಿ ಇದೇ ದಿನಾಂಕ 6 ರಂದು ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದ ಪ್ರಭಾಕರ್ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಚನ್ನಗಿರಿ ಠಾಣೆಯ ಸಿಪಿಐ ಪಿ.ಬಿ.ಮಧು ನೇತೃತ್ವದಲ್ಲಿ ಪಿಎಸ್ಐ ಜಗದೀಶ್, ಬಿ.ಎಸ್.ರೂಪ್ಲಿ ಬಾಯಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ರುದ್ರೇಶ್, ಪರಶು ರಾಮ್, ಪ್ರವೀಣ್ ಗೌಡ, ರುದ್ರೇಶ್, ಮಂಜುನಾಥ್ ಪ್ರಸಾದ್, ರೇವಣ ಸಿದ್ದಪ್ಪ ಒಳಗೊಂಡ ತಂಡವು ಆರೋಪಿತರಿಬ್ಬರನ್ನು ಬಂಧಿಸಿ, ಮಾರುತಿ ಸುಜುಕಿ ಸ್ವಿಪ್ಟ್ ಕಾರು, ದರೋಡೆ ಮಾಡಿದ 5 ಗ್ರಾಂ ಬಂಗಾರದ ಉಂಗುರ, 17 ಗ್ರಾಂ ಬೆಳ್ಳಿ ಕೈ ಕಡಗ, 20 ಗ್ರಾಂ ಬೆಳ್ಳಿಯ ಚೈನು, 7 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿತರ ಪತ್ತೆಗೆ ಬಲೆ ಬೀಸಲಾಗಿದೆ.