ದಾವಣಗೆರೆ, ಅ.11- ಗೋವುಗಳ ಅಕ್ರಮ ಸಾಗಾಟದ ಜಾಲ ಪತ್ತೆ ಮಾಡಿರುವ ಇಲ್ಲಿನ ಹಿಂದೂ ಜಾಗರಣ ವೇದಿಕೆಯು ಕಂಟೇನರ್ ಮತ್ತು ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ 28 ಗೋವುಗಳನ್ನು ರಕ್ಷಿಸಿರುವ ಘಟನೆ ನಗರದ ಹೊರ ವಲಯದಲ್ಲಿ ಭಾನುವಾರ ರಾತ್ರಿ ನಡೆದಿದೆ.
ರಾಣೇಬೆನ್ನೂರು ಕಡೆಯಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯ ಮುಖೇನ ಕಂಟೇನರ್‍ನಲ್ಲಿ 28 ಹಸುಗಳು, ಎತ್ತುಗಳನ್ನು ಯಾವುದೇ ಸೂಕ್ತ ದಾಖಲೆ, ಸಂಬಂಧಿಸಿದ ಇಲಾಖೆ ಪರವಾನಿಗೆ ಪಡೆಯದೇ ಹಿಂಸಾತ್ಮಕವಾಗಿ ತುಂಬಿಕೊಂಡು, ಅವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ವಿದ್ಯಾನಗರ ಪೊಲೀಸರು, ಹಿಂಜಾವೇ ಪದಾಧಿಕಾರಿಗಳ ಸಹಿತ ದಾಳಿ ಮಾಡಿ, ಗೋವುಗಳ ರಕ್ಷಿಸಿದ್ದಾರೆ. ಸರ್ಕಾರವು ಅಕ್ರಮವಾಗಿ, ಹಿಂಸಾತ್ಮಕವಾಗಿ ಗೋವುಗಳ ಸಾಗಾಟ ನಿಷೇಧಿಸಿದೆ. ಅಲ್ಲದೇ, ಗೋವುಗಳ ರಕ್ಷಣೆಗಾಗಿ ಬಿಗಿಯಾದ ಕಾನೂನು ಜಾರಿಗೆ ತಂದಿದೆ.ಹೀಗಿದ್ದರೂ ಕಾಯ್ದೆ, ಕಾನೂನುಗಳು ಕೇವಲ ಪುಸ್ತಕಕ್ಕೆ ಸೀಮಿತವಾಗಿದ್ದು, ಪೂಜನೀಯ ಗೋವುಗಳ ರಕ್ಷಣೆಗೆ ಸರ್ಕಾರ ಮುಂದಾಗಲಿ ಎಂದು ಹಿಂಜಾವೇ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಕಂಟೇನರ್‍ನಲ್ಲಿದ್ದ 18 ಹಸುಗಳು ಹಾಗೂ ಮತ್ತೊಂದು ಲಾರಿಯಲ್ಲಿ ತುಂಬಿದ್ದ 6 ರಾಸುಗಳನ್ನು ರಕ್ಷಿಸಿ ಹೆಬ್ಬಾಳ ಮತ್ತು ಆವರಗೆರೆ ಗೋಶಾಲೆಗಳಿಗೆ ಸುರಕ್ಷಿತವಾಗಿ ಒಪ್ಪಿಸಲಾಗಿದೆ ಎಂದು ಹಿಂಜಾವೇ ಮುಖಂಡ ಸತೀಶ್ ಪೂಜಾರಿ ತಿಳಿಸಿದ್ದಾರೆ.
ಈ ಸಂಬಂಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.