ದಾವಣಗೆರೆ, ಏ.20- ದಾವಣಗೆರೆ ಮತ್ತು ಹರಿಹರ ಡಿಪೋ ಸೇರಿದಂತೆ 10 ಮಂದಿ ಸಾರಿಗೆ ನೌಕರರನ್ನು ಕೆಎಸ್ಆರ್ಟಿಸಿ ಸಂಸ್ಥೆಯು ಸೇವೆಯಿಂದ ಇಂದು ಅಮಾನತ್ತುಗೊಳಿಸಿದೆ.
ದಾವಣಗೆರೆಯ ಎರಡು ಡಿಪೋ, ಹರಿಹರದ ಒಂದು ಡಿಪೋದಿಂದ 66 ಜನ ನೌಕರರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಸಾರಿಗೆ ನೌಕರರ ಮುಷ್ಕರಕ್ಕೆ ಸಾಥ್ ನೀಡಿದ್ದ 11 ತರಬೇತಿ ಸಿಬ್ಬಂದಿಯನ್ನು ಆಯ್ಕೆ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಸಾರಿಗೆ ನೌಕರರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಜಿಲ್ಲೆಯ 25 ನೌಕರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಪೈಕಿ ದಾವಣಗೆರೆ ವಿಭಾಗದ 12 ಹಾಗೂ ಹರಿಹರ ವಿಭಾಗದ 13 ನೌಕರರ ವಿರುದ್ಧ ಎಫ್ಐಆರ್ ದಾಖಲಿಸ ಲಾಗಿದೆ. ಕೆಎಸ್ಆರ್ಟಿಸಿ ನೌಕರರ ಮುಷ್ಕರ ನಡೆಯುತ್ತಿ ದ್ದರೂ ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ಕೆಲವರು ಅವರನ್ನು ಕೆಲಸ ಮಾಡದಂತೆ ತಡೆದಿದ್ದರು. ಅಲ್ಲದೇ, ತಟ್ಟೆ, ಲೋಟ ಬಡಿದು ಪ್ರತಿಭಟಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹರಿಹರ ಟೌನ್ ಪೊಲೀಸ್ ಠಾಣೆಯಲ್ಕಿ 13, ಕೆಟಿಜಿ ನಗರ ಪೊಲೀಸ್ ಠಾಣೆಯಲ್ಲಿ 12 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ಮಾಹಿತಿ ನೀಡಿದ್ದಾರೆ.
ಸಾರಿಗೆ ನೌಕರರ ಈ ಮುಷ್ಕರದಿಂದ ಇರುವರೆಗೂ 4.50 ಕೋಟಿ ರೂ. ನಷ್ಟು ಉಂಟಾಗಿದೆ. ಇಂದು 120 ಜನರು ಕರ್ತವ್ಯಕ್ಕೆ ಹಾಜರಾಗಿದ್ದು, 90 ಬಸ್ಗಳು ವಿವಿಧೆಡೆ ಸಂಚರಿಸಿವೆ ಎಂದು ತಿಳಿಸಿದ್ದಾರೆ.
ವರ್ಗಾವಣೆ, ಅಮಾನತ್ತು, ವಜಾ, ಎಸ್ಮಾ ಕಾಯ್ದೆಯಡಿ ಕೇಸ್ ದಾಖಲು ಇಂತಹ ದಿಟ್ಟ ಕ್ರಮಗಳು ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಪೈಕಿ ಅನೇಕರಲ್ಲಿ ಅಳುಕು ಹುಟ್ಟಿ ಹಾಕಿವೆ. ಮುಷ್ಕರ ನಿರತ ಮತ್ತಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಹೆಚ್ಚಾಗಿದ್ದು, ಮತ್ತಷ್ಟು ಬಸ್ಸುಗಳು ರಸ್ತೆಗಿಳಿಯುವ ಲಕ್ಷಣಗಳು ಗೋಚರಿಸುತ್ತಿವೆ.