ಎಲೆ ಕವಚ ಒಣಗುವ ರೋಗದ ನಿರ್ವಹಣಾ ಕ್ರಮಗಳು

ದಾವಣಗೆರೆ, ಫೆ.22-  ಜಿಲ್ಲೆಯಲ್ಲಿ ಭತ್ತದ ಬೆಳೆಯು ವಿವಿಧ ಹಂತಗಳಲ್ಲಿದ್ದು, ಅಲ್ಲಲ್ಲಿ ಎಲೆ ಕವಚ ಒಣಗುವ ರೋಗವು ಕಾಣಿಸಿ ಕೊಂಡಿದೆ. ರೈತರು ಬಾಂಧವರು ತಕ್ಷಣವೇ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹಾನಿಯ ಲಕ್ಷಣಗಳು: ಎಲೆಯ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಉದ್ದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಒಣಗುತ್ತವೆ. ಕೆರೆ ಕೆಳಗಿನ ಅಥವಾ ನೀರಿನ ಒತ್ತಡ ಇರುವ ತಗ್ಗು ಪ್ರದೇಶದ ಗದ್ದೆಗಳಲ್ಲಿ ರೋಗದ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ನಿರ್ವಹಣಾ ಕ್ರಮಗಳು: ನೀರು ಹರಿಸುವಾಗ ಜೊತೆಯಲ್ಲಿ ಸಗಣಿ ರಾಡಿ ಬಿಡುವುದು ಸೂಕ್ತ. ಸಗಣಿ ರಾಡಿ ಜೊತೆಯಲ್ಲಿ ಟ್ರೈಕೋಡರ್ಮಾವನ್ನು ಬೆರೆಸಿ ಬಿಡುವುದು ತುಂಬಾ ಉಪಯುಕ್ತ. ರೋಗ ತಡೆಗಟ್ಟುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. 

ಒಂದು ಗ್ರಾಂ ಕಾರ್ಬನ್‌ಡೈಜಿಂ 50 ಡಬ್ಲ್ಯೂಪಿ ಅಥವಾ 1 ಮಿ.ಲೀ. ಪ್ರೊಪಿಕೊನೋಜೋಲ್ 25 ಇ.ಸಿ. ಅಥವಾ 2 ಮಿ.ಲೀ. ಹೆಕ್ಸಾಕೋನ ಜೋಲ್ 5 ಇ.ಸಿ. ಯನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. 0.4 ಗ್ರಾಂ ಟ್ರೈಶ್ಲಾಕ್ಸಿಸ್ಟ್ರೋಬಿನ್ 25 ಮತ್ತು 0.4 ಗ್ರಾಂ ಟೆಬುಕೋನಜೋಲ್ 50 ಅನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ ಅವೆರಡರ ಸಂಯುಕ್ತ ರಾಸಾಯನಿಕ ಲಭ್ಯವಿದ್ದಲ್ಲಿ ಸಿಂಪರಣೆ ಮಾಡುವುದು.

ವಿಶೇಷ ಸೂಚನೆ: ಗದ್ದೆಯಲ್ಲಿರುವ ನೀರನ್ನು ಬಸಿದು ದ್ರಾವಣವನ್ನು ಬುಡಭಾಗ ನೆನೆಯುವಂತೆ ಸಿಂಪಡಿಸಬೇಕು. ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸಿಂಪರಣೆ ಕೈಗೊಳ್ಳುವುದು ಉತ್ತಮ. ಅವಶ್ಯಕತೆ ಇದ್ದಲ್ಲಿ 15 ದಿನಗಳ ನಂತರ ಪುನಃ ಸಿಂಪರಣೆ ಕೈಗೊಳ್ಳುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!