ಪಂಚಮಸಾಲಿ, ಕುರುಬ ಹಾಗೂ ನಾಯಕರ ನಂತರ ಮತ್ತೊಂದು ದೊಡ್ಡ ಸಮುದಾಯದಿಂದ ಮೀಸಲಾತಿ ಬೇಡಿಕೆ
ಬೆಂಗಳೂರು, ಫೆ 17 – ಪಂಚಮಸಾಲಿ, ಕುರುಬ ಹಾಗೂ ನಾಯಕ ಸಮುದಾಯಗಳು ಮೀಸಲಾತಿಗೆ ಒತ್ತಾಯಿಸುತ್ತಿರುವ ಬೆನ್ನಲ್ಲೇ ಒಕ್ಕಲಿಗರು ತಮ್ಮ ಮೀಸಲಾತಿ ಕೋಟಾವನ್ನು ಲೆಕ್ಕಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ಮತ್ತು ಒಕ್ಕಲಿಗ ಸಮಾಜದ ಮುಖಂಡರು ಇಂದು ಸಭೆ ನಡೆಸಿ, ಈ ನಿರ್ಣಯ ಕೈಗೊಂಡಿದ್ದಾರೆ.
ವಿಜಯನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ ಚಿಂತನ ಮಂಥನ ಸಭೆಯಲ್ಲಿ ಒಕ್ಕಲಿಗರಿಗೂ ಮೀಸಲಾತಿ ಹೆಚ್ಚಳ ಮಾಡುವಂತೆ ಒತ್ತಾಯಿ ಸಲು ನಿರ್ಣಯ ಕೈಗೊಂಡಿದೆ.
ಇಂದು ಸುದೀರ್ಘ ಸಭೆ ನಡೆಸುವ ಸಂದರ್ಭದಲ್ಲಿ ಸಮಾಜದ ಮುಖಂಡರುಗಳು, ಗ್ರಾಮೀಣ ಒಕ್ಕಲಿಗರ ಸ್ಥಿತಿಗತಿಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಲ್ಲದೆ, ಬಡ ಮತ್ತು ಮಧ್ಯಮ ವರ್ಗದವರು ಆಸ್ತಿಪಾಸ್ತಿ ಮಾರಿ ಮಕ್ಕಳಿಗೆ ಶಿಕ್ಷಣ ನೀಡಿದರೆ, ಒಂದೆಡೆ ಉದ್ಯೋಗ ದೊರೆಯುತ್ತಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಉನ್ನತ ಶಿಕ್ಷಣದಡಿ ಮೀಸಲಾತಿ ಸಮಾಜಕ್ಕೆ ಬೆರಳಣಿಕೆಯಷ್ಟಿದೆ. ಹೀಗಾಗಿ ಹಿಂದುಳಿದ ವರ್ಗದಲ್ಲಿ ಈಗಿರುವ ಶೇ. 4 ರಷ್ಟು ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿ ಸಬೇಕು. ಅಷ್ಟೇ ಅಲ್ಲ ವೀರಶೈವ ಸಮು ದಾಯದ ಅಭಿವೃದ್ಧಿಗೆ ಸ್ಥಾಪನೆ ಗೊಂಡಿರುವ ಅಭಿವೃದ್ದಿ ನಿಗಮದ ಮಾದರಿಯಲ್ಲೇ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿ, ಬರುವ ಮುಂಗಡ ಪತ್ರದಲ್ಲಿ 5000 ಸಾವಿರ ಕೋಟಿ ರೂ. ಅನುದಾನ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಅಧಿಕಾರಕ್ಕೆ ಬರುತ್ತಿರುವ ಸರ್ಕಾರಗಳು ಸಮಾಜವನ್ನು ಕಡೆಗಣಿಸುತ್ತಿವೆ ಎಂಬ ಅಭಿಪ್ರಾಯಗಳು ಕೇಳಿಬಂದಿದೆ. ನಮ್ಮ ಅಧಿಕಾರಿಗಳಿಗೆ ಪ್ರಮುಖ ಸ್ಥಾನಮಾನಗಳನ್ನೂ ನೀಡುತ್ತಿಲ್ಲ. ಆಡಳಿತದಲ್ಲಿ ಕಡೆಗಣನೆಗೆ ಒಳಗಾಗಿದ್ದೇವೆ. ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಹೆಚ್ಚು ಜನಸಂಖ್ಯೆಯಿಂದ ಎರಡನೇ ಸ್ಥಾನದಲ್ಲಿದೆ. ಗ್ರಾಮೀಣ ಜನರ ಬದುಕು ಮತ್ತು ಬದುಕಿನಲ್ಲಿರುವ ನಮ್ಮ ರೈತ ಮಕ್ಕಳಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಮೀಸಲಾತಿ ಅವಶ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನಮ್ಮ ಹೋರಾಟ ಕೇವಲ ಬೇಡಿಕೆಯಷ್ಟೇ ಹೊರತು, ಯಾರ ವಿರುದ್ಧವೂ ಅಲ್ಲ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಹಿಂದುಳಿದ ವರ್ಗದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. 10ಕ್ಕೆ ಹೆಚ್ಚಳ ಮಾಡಿ ಎಂದು ಸಭೆ ತೀರ್ಮಾನಿಸಿದೆ.
ಸಭೆಯಲ್ಲಿ ಕೈಗೊಂಡ ಈ ಮಹತ್ವದ ನಿರ್ಣಯಗಳನ್ನು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.