ದಾವಣಗೆರೆ, ಫೆ.16- ಕೇಂದ್ರ ಸರ್ಕಾರವು ವಿನೂತನವಾಗಿ ಪ್ರಕಟಿಸಿರುವ ‘ಆತ್ಮ ನಿರ್ಭರ ಭಾರತ’ ಯೋಜನೆಯಡಿ ಹಣಕಾಸು ಸೌಲಭ್ಯವನ್ನು ‘ಕೃಷಿ ಮೂಲಸೌಕರ್ಯ ನಿಧಿ’ ಅಡಿಯಲ್ಲಿ ತೋಟಗಾರಿಕೆ ವಲಯದಲ್ಲೇ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲು ಸಹಾಯಕವಾಗಲಿದೆ.
ಸಮುದಾಯ ಸ್ವತ್ತುಗಳಾದ ಕೋಲ್ಡ್ ಸ್ಟೋರೇಜ್, ಸಂಗ್ರಹ ಕೇಂದ್ರಗಳು, ಉತ್ತಮ ಸುಗ್ಗಿಯ ನಂತರದ ನಿರ್ವಹಣೆಗಾಗಿ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೂ ಸಹ ಸಹಕಾರಿಯಾಗಲಿವೆ. ಈ ಸೌಲಭ್ಯಗಳಿಂದ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗಲಿದೆ. ಈ ಸೌಲಭ್ಯಗಳಿಂದಾಗಿ ರೈತರು ತಮ್ಮ ಬೆಳೆಗಳನ್ನು ಸಂಗ್ರಹಿಸಲು ಮತ್ತು ತಮ್ಮ ಸರಕುಗಳನ್ನು ಸರಿಯಾದ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗಲಿದೆ ಹಾಗೂ ರೈತರ ಆದಾಯವನ್ನು ಹೆಚ್ಚಿಸುತ್ತದೆ.
ಆಹಾರ ಸಂಸ್ಕರಣೆಯ ಅನುಕೂಲದಿಂದ ರೈತರು ತಮ್ಮ ಬೆಳೆಗಳಿಗೆ ಹೆಚ್ಚಿನ ಬೆಲೆ
ಪಡೆಯಲು ಸಾಧ್ಯವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಾಲ ನೀಡುವ ಹಲವು ಹಣಕಾಸಿನ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ರೂ.1 ಲಕ್ಷ ಕೋಟಿ ಸಾಲದ ಯೋಜನೆ ಇದಾಗಿದೆ.
ಅರ್ಹ ಫಲಾನುಭವಿಗಳು : ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು, ಬಹುಪಯೋಗಿ ಸಹಕಾರಿ ಸಂಘಗಳು, ಮಾರುಕಟ್ಟೆ ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಕೃಷಿ ಉದ್ಯಮಿಗಳು, ಕೃಷಿ ಆರಂಭಿಕಗಳು (ಅಗ್ರಿ ಸ್ಟಾರ್ಟ್ಅಪ್ಸ್), ಸ್ವ ಸಹಾಯ ಸಂಘಗಳು, ಜಂಟಿ ಹೊಣೆಗಾರಿಕೆ ಗುಂಪುಗಳು, ಕೇಂದ್ರ/ರಾಜ್ಯ/ಸ್ಥಳೀಯ ಸಂಸ್ಥೆಗಳ ಪ್ರಾಯೋಜಿತ ಪಿಪಿಪಿ ಯೋಜನೆಗಳು, ಮಾಲೀಕತ್ವದ ಸಂಸ್ಥೆಗಳು/ಪಾಲುದಾರಿಕೆ ಸಂಸ್ಥೆಗಳು/ಖಾಸಗಿ ಸೀಮಿತ ಸಂಸ್ಥೆಗಳು, ಕಂಪೆನಿಗಳು, ಪಾಲುದಾರಿಕೆ ಸಂಸ್ಥೆಗಳು ಸೇರಿದಂತೆ ಎಲ್ಲಾ ವ್ಯಾಪಾರ ಘಟಕಗಳು ಅರ್ಹವಾಗಿರುತ್ತವೆ.
ಆಸಕ್ತ ಸಂಸ್ಥೆಗಳು ತೋಟಗಾರಿಕೆ ಇಲಾಖೆಯ ತಾಲ್ಲೂಕುಗಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ದೂರವಾಣಿ ಸಂಖ್ಯೆ: 08192-297090 ನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.