ಜು.20 ರ ನಂತರ ನಾಲೆಗಳಿಗೆ ನೀರು ಸಾಧ್ಯತೆ : ಪವಿತ್ರ

ಜು.20 ರ ನಂತರ ನಾಲೆಗಳಿಗೆ ನೀರು ಸಾಧ್ಯತೆ : ಪವಿತ್ರ - Janathavaniಮಲೇಬೆನ್ನೂರು, ಜು.7- ಭದ್ರಾ ಅಚ್ಚುಕಟ್ಟಿನ ಮುಂಗಾರು ಹಂಗಾಮು ಬೆಳೆಗಳಿಗೆ ಜಲಾಶಯದಿಂದ ನೀರು ಹರಿಸುವ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳುವ ಕುರಿತು ಇದೇ ದಿನಾಂಕ 15 ರಂದು ಭದ್ರಾ ಕಾಡಾ ಸಭೆ ಕರೆಯಲಾಗಿದೆ ಎಂದು ಭದ್ರಾ ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ತಿಳಿಸಿದ್ದಾರೆ.

`ಜನತಾವಾಣಿ’ಯೊಂದಿಗೆ ಮಾತನಾಡಿದ ಅವರು, ಇದೇ ದಿನಾಂಕ 15 ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಸಮೀಪದ ಮಲವಗೊಪ್ಪ ದಲ್ಲಿರುವ ಭದ್ರಾ ಕಾಡಾ ಕಛೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಸಸಿ ಮಡಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜು. 9 ರ ನಂತರ ಮತ್ತೆ ಮಳೆ ಆರಂಭವಾಗುವ ನಿರೀಕ್ಷೆ ಇದೆ. ಅಲ್ಲದೆ, ಜಲಾಶಯದ ಇತಿಹಾಸ ಗಮನಿಸಿದರೆ ಜುಲೈ ತಿಂಗಳ ಕೊನೆಯಲ್ಲಿ ಮತ್ತು ಆಗಸ್ಟ್‌ ತಿಂಗಳಲ್ಲಿ ಮಳೆೆ ಆಗಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿದೆ. ಈ ಅಂಶವನ್ನು ಮನದಲ್ಲಿಟ್ಟುಕೊಂಡು ಜುಲೈ 20 ರ ನಂತರ ನಾಲೆಗಳಿಗೆ ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪವಿತ್ರ ರಾಮಯ್ಯ ಹೇಳಿದರು.

ಭದ್ರಾ ಜಲಾಶಯಕ್ಕೆ ಈ ವರ್ಷ ಜೂನ್‌ ತಿಂಗಳಲ್ಲೇ 16 ಅಡಿ ನೀರು ಏರಿಕೆ ಆಗಿದ್ದು, 16 ಟಿಎಂಸಿ ನೀರು ಹರಿದು ಬಂದಿದೆ. 1994 ರ ಜೂನ್‌ನಲ್ಲಿ 17.10 ಟಿಎಂಸಿ ಮತ್ತು 1971 ರ ಜೂನ್‌ನಲ್ಲಿ 22.31 ಟಿಎಂಸಿ ನೀರು ಹರಿದು ಬಂದಿರುವುದು ದಾಖಲಾಗಿದೆ.

ಸದ್ಯ ಜಲಾಶಯದಲ್ಲಿ 155 ಅಡಿ 6 ಇಂಚು ನೀರಿದ್ದು, ಒಳಹರಿವು 1759 ಕ್ಯೂಸೆಕ್ಸ್‌ ಇದೆ, 71.536 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 38.869 ಟಿಎಂಸಿ ನೀರು ಸಂಗ್ರಹವಾಗಿದೆ.

ಕಳೆದ ವರ್ಷ ಈ ದಿನ ಜಲಾಶಯದಲ್ಲಿ 142 ಅಡಿ 11 ಇಂಚು ನೀರಿತ್ತು. 28,931 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 10 ಟಿಎಂಸಿ ನೀರು ಹೆಚ್ಚಿದೆ.

ರೈತರ ಒತ್ತಡ : ಅಚ್ಚುಕಟ್ಟಿನ ಮೇಲ್ಭಾಗದ ರೈತರು ಜುಲೈ 15 ರಿಂದಲೇ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಡ ಹಾಕುತ್ತಿದ್ದು, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಕೊನೆ ಭಾಗದ ರೈತರ ಅಭಿಪ್ರಾಯ ಸಂಗ್ರಹಿಸಿ, ಜುಲೈ 20 ರ ನಂತರ ನೀರು ಹರಿಸುವ ಚಿಂತನೆಯಲ್ಲಿದ್ದಾರೆ.

ಸರ್ಕಾರದ ಪತ್ರ : ಭದ್ರಾ ಜಲಾಶಯದಿಂದ ಅಪ್ಪರ್‌ ಭದ್ರಾ ಕಾಲುವೆಗೆ ಜುಲೈ 6 ರಿಂದ ನೀರು ಹರಿಸುವಂತೆ ಸರ್ಕಾರ ಆದೇಶಿಸಿದೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಪವಿತ್ರ ರಾಮಯ್ಯ ಅವರು ಬುಧವಾರ ಸಾಯಂಕಾಲ ಭದ್ರಾ ಉನ್ನತ ಅಧಿಕಾರಿಗಳೊಂದಿಗೆ ಭದ್ರಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.

ಜಲಾಶಯದಲ್ಲಿರುವ ನೀರಿನ ಸ್ಥಿತಿಗತಿ ಆಧರಿಸಿ ಮತ್ತು ಅಚ್ಚುಕಟ್ಟಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಬೇಕಾಗಿರುವುದರಿಂದ ಸದ್ಯ ಅಪ್ಪರ್‌ ಭದ್ರಾಕ್ಕೆ ನೀರು ಹರಿಸುವುದು ಬೇಡ. ಮಳೆ ಚನ್ನಾಗಿ ಬಂದು ಡ್ಯಾಂ ತುಂಬಿದರೆ ನೀರು ಬಿಡೋಣ ಎಂಬ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.

error: Content is protected !!