ದಾವಣಗೆರೆ, ಜು.6- ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂತಿಮ ವಿನ್ಯಾಸಗೊಳ್ಳದೇ ಇರುವಂತಹ ಹೊಸದಾಗಿ ನಿರ್ಮಿಸಲಾಗಿರುವ ಬಡಾವಣೆಗೆ ದೂಡಾದಿಂದ ಯಾವುದೇ ಆಕ್ಷೇಪಣೆ ಇಲ್ಲದೆ ಅನುಮತಿ ನೀಡಿದ್ದು, ಪಾಲಿಕೆಯಿಂದ ಡೋರ್ ನಂಬರ್ ಸಹ ನೀಡಲಾಗಿದೆ. ಇದು ಅಕ್ರಮ ಮತ್ತು ಭ್ರಷ್ಟಾಚಾರ ಮಾಡಲಾಗಿದೆ ಎಂದು ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಆರೋಪಿಸಿದ್ದಾರೆ.
ಹೊಸ ಬಡಾವಣೆ ನಿರ್ಮಾಣದಲ್ಲಿ ಎಲ್ಲಾ ಸೌಕರ್ಯ ಗಳು ಲಭ್ಯವಿರಬೇಕು ಎಂದು ದೂಡಾ ಆದೇಶಿಸುತ್ತದೆ. ಆದರೆ, ಆವರಗೆರೆ ಗ್ರಾಮದ ಸರ್ವೇ ನಂಬರ್‍ನಲ್ಲಿ 1 ಎಕರೆ 20 ಗುಂಟೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿ ಕೆಲವು ಸೌಲಭ್ಯಗಳಿ ಲ್ಲದಿದ್ದರೂ ಪಾಲಿಕೆಯಿಂದ ಡೋರ್ ನಂಬರ್ ನೀಡ ಲಾಗಿದ್ದು, ಇದು ಅಕ್ರಮವಾಗಿ ನೀಡಲಾಗಿದೆ ಎಂದು ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಪಾಲಿಕೆಯು ಇವುಗಳಿಗೆ ಡೋರ್ ನಂಬರ್ ನೀಡಿರುವುದನ್ನು ವಿರೋಧಿಸಿ ಆಡಳಿತ ಪಕ್ಷದ ನಗರ ಯೋಜನೆ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಮಾ ಪ್ರಕಾಶ್ ಮೇಯರ್ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಹಿನ್ನೆಲೆಯಲ್ಲಿ ಆಯುಕ್ತರು ಇದನ್ನು ತಡೆಯುವಂತೆ ನೋಂದಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಆದಾಗಲೇ ಅಲ್ಲಿನ ನಿವೇಶನಗಳು ನೋಂದಣಿಯಾಗಿವೆ ಎಂದು ಹೇಳಿದರು.
ಫೆಬ್ರವರಿಯಲ್ಲಿ ನಡೆದ ಪಾಲಿಕೆಯ ತುರ್ತು ಸಭೆಯಲ್ಲಿ ಪಾಲಿಕೆಯಿಂದ ನೀಡಲಾಗಿರುವ ಡೋರ್ ನಂಬರ್‍ಗಳು ಆ ವಾರ್ಡಿನ ಸದಸ್ಯರಲ್ಲದೇ ಬೇರೆ ಯಾವ ಸದಸ್ಯರ ಗಮನಕ್ಕೂ ಬಂದಿಲ್ಲ. ಇದನ್ನೆಲ್ಲಾ ನೋಡಿದರೆ ಅಕ್ರಮವಾಗಿ ಡೋರ್ ನಂಬರ್ ನೀಡಲಾಗಿದೆ. ಇವುಗಳನ್ನು ರದ್ದುಪಡಿಸಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇದನ್ನು ಗಮನಿಸಿದರೆ ದೂಡಾದಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡಬಹುದು ಎನ್ನುವ ಅವ್ಯವಸ್ಥೆ ಇದೆ. ಲೇಔಟ್ ಅಂತಿಮ ವಿನ್ಯಾಸಗೊಳ್ಳದೇ ಇರುವಂತಹ ಬಡಾವಣೆಗೆ ದೂಡಾದಿಂದ ಯಾವುದೇ ಆಕ್ಷೇಪಣೆ ಇಲ್ಲದೆ ಅನುಮತಿ ನೀಡಿರುವುದು ಸರಿಯಲ್ಲ. ಇದರ ವಿರುದ್ಧ ತನಿಖೆ ನಡೆಸಬೇಕಾಗಿದೆ ಎಂದು ನಾಗರಾಜ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಗಣೇಶ್ ಹುಲ್ಲುಮನೆ, ಜೆ.ಡಿ. ಪ್ರಕಾಶ್, ಇಟ್ಟಿಗುಡಿ ಮಂಜುನಾಥ ಸೇರಿದಂತೆ ಇತರರು ಇದ್ದರು.