ದಾವಣಗೆೆರೆ, ಏ.16 – ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಸುಜಾತ ಮಂಡಲ್ ಖಾನ್ ಪರಿಶಿಷ್ಟ ಜಾತಿಯವರ ಬಗ್ಗೆ ಅಪಮಾನಕರ ಹೇಳಿಕೆ ನೀಡಿರುವುದನ್ನು ಭಾರತೀಯ ಜನತಾ ಪಾರ್ಟಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರು ಖಂಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಅವರು ಪರಿಶಿಷ್ಟ ಜಾತಿಯವರ ಅವಶ್ಯಕತೆಯನ್ನು ಪೂರೈಸಿದ್ದರೂ ಅವರ ಬೇಡಿಕೆಗಳನ್ನು ಕಡಿಮೆ ಮಾಡಿಲ್ಲ. ಹಾಗಾಗಿ ಕೆಲವರು ನೈಜವಾಗಿ ಭಿಕ್ಷುಕರಾಗಿದ್ದಾರೆ. ಇನ್ನೂ ಕೆಲವರನ್ನು ಸಾಂಧರ್ಬಿಕ ಭಿಕ್ಷಕರನ್ನಾಗಿ ಮಾಡಿದ್ದಾರೆ. ಆದರೆ ಇಲ್ಲಿ ಪರಿಶಿಷ್ಟ ಜಾತಿಯವರು ನೈಜವಾಗಿಯೇ ಬೇಡುವ ಭಿಕ್ಷಕರು ಎಂದು ಸುಜಾತ ಮಂಡಲ್ ಹೇಳಿಕೆ ದಲಿತ ಸಮುದಾಯ ದವರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದೆ ಎಂದರು.
ಅಂಬೇಡ್ಕರ್ ಜಯಂತಿ ದಿನದಂದು ಈ ರೀತಿ ಹೇಳಿಕೆ ನೀಡಿರುವುದು ಸುಜಾತ ಅವರ ಹೇಳಿಕೆಯಿಂದ ಶತಮಾನದಿಂದ ತಮ್ಮ ಬೆವರಿಗೆ ತಕ್ಕ ಬೆಲೆ ಇಲ್ಲದಿದ್ದರೂ, ದುಡಿಯುತ್ತಲೇ ಬದುಕು ಸಾಗಿಸುತ್ತಿರುವ ಪ್ರತಿಯೊಬ್ಬ ಪರಿಶಿಷ್ಟ ಜಾತಿಯವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಕಿಡಿಕಾರಿದರು.
ಈ ಕೂಡಲೇ ಅಂಬೇಡ್ಕರ್ ಪ್ರತಿಮೆ ಎದುರು ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ಪದಾಧಿಕಾರಿಗಳಾದ ಜಿ.ಡಿ. ಗಂಗಾಧರ್, ಮಂಜಾನಾಯ್ಕ್, ಅಂಜಿನಪ್ಪ, ಜಯ್ಯಣ್ಣ, ಡಿ. ಹನುಮಂತಪ್ಪ, ನಾಗರಾಜನಾಯ್ಕ್, ಮುರಿಗೇಂದ್ರನಾಯ್ಕ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.