ಕಾಂಗ್ರೆಸ್ನ ಇಚ್ಛಾಶಕ್ತಿಯಿಂದ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಿದ್ದ ಶಿವನಳ್ಳಿ ರಮೇಶ್
ದಾವಣಗೆರೆ, ಜು.6- ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಅಮರ್ ಜವಾನ್ ಉದ್ಯಾನವನವನ್ನು ತರಾತುರಿಯಲ್ಲಿ ಲೋಕಾರ್ಪಣೆ ಮಾಡಿದ್ದನ್ನು ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಆಕ್ಷೇಪಿಸಿದ್ದಾರೆ.
ಅಮರ್ ಜವಾನ್ ಉದ್ಯಾನವನ ತರಾತುರಿಯಲ್ಲಿ ಉದ್ಘಾಟನೆ ಮಾಡುವ ಕೆಲಸ ಏಕೆ ಬೇಕಿತ್ತು. ಈ ಕಾರ್ಯಕ್ರಮಕ್ಕೆ ಅವರದ್ದೇ ಪಕ್ಷದ ಮೇಯರ್ ಎಸ್.ಟಿ. ವೀರೇಶ್ ಹೋಗಿರಲಿಲ್ಲ. ಅದು ಅಲ್ಲದೇ ಆ ಭಾಗದ ಮಹಾನಗರ ಪಾಲಿಕೆ ಸದಸ್ಯರನ್ನು ಆಹ್ವಾನಿಸಿಲ್ಲ ಎಂದು ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಅಮರ್ ಜವಾನ್ ಉದ್ಯಾನವನದ ಅಭಿವೃದ್ಧಿಗೆ 65 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದು, ಈಗ ಕೇವಲ 15 ಲಕ್ಷ ರೂ.ನಷ್ಟು ಕೆಲಸ ಆಗಿದೆ. ಇನ್ನೂ ಒಂದೂವರೆ ತಿಂಗಳಿನಲ್ಲಿ ಎಲ್ಲಾ ಕೆಲಸ ಮುಗಿಯುತ್ತಿತ್ತು. ಆದರೆ, ನಿನ್ನೆ ಈ ಉದ್ಯಾನವನ ಲೋಕಾರ್ಪಣೆ ಮಾಡಿರುವ ಉದ್ದೇಶ ಏನು ? ಎಂದು ಪ್ರಶ್ನಿಸಿದರು.
ಅಮರ್ ಜವಾನ್ ಉದ್ಯಾನವನ್ನು ಬಿಜೆಪಿ ತಾನು ಮಾಡಿದ್ದು, ಎಂದು ಹೇಳಿಕೊಂಡಿದೆ. ಇದೆಲ್ಲಾ ಸುಳ್ಳು. ಕಾಂಗ್ರೆಸ್ನ ಇಚ್ಛಾಶಕ್ತಿಯಿಂದ ಉದ್ಯಾನವನ ನಿರ್ಮಾಣಗೊಂಡಿ ದೆ. 2018ರಲ್ಲಿ ನಗರ ಪಾಲಿಕೆಯ ಕೊನೆ ಸಭೆಯಲ್ಲಿ ಆ ಭಾಗದ ಸದಸ್ಯರಾಗಿದ್ದ ಶಿವನಹಳ್ಳಿ ರಮೇಶ್ ಅವರು ಮಾಜಿ ಸೈನಿಕರ ಬೇಡಿಕೆಯಂತೆ ಅಲ್ಲಿ ಅಮರ್ ಜವಾನ್ ಉದ್ಯಾನವನ ನಿರ್ಮಾಣದ ವಿಚಾರ ಪ್ರಸ್ತಾಪ ಮಾಡಿದ್ದರು. ಅದರಂತೆ ಅಂದಿನ ಸಭೆ ಅದಕ್ಕೆ ಅನುಮೋದನೆ ನೀಡಿತ್ತು. ಆದರೆ, ಈ ವಿಚಾರವನ್ನು ಮರೆಮಾಚಿಸುತ್ತಿರುವ ಬಿಜೆಪಿ ಮುಖಂಡರು ಅಮರ್ ಜವಾನ್ ಸ್ಮಾರಕವನ್ನು ನಾವು ನಿರ್ಮಾಣ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಈ ವಿಚಾರಕ್ಕೆ ಅನುಮೋದನೆ ಮಾಡಿರುವುದಕ್ಕೆ ನನ್ನ ಬಳಿ ದಾಖಲೆ ಇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಗಣೇಶ್ ಹುಲ್ಮನಿ, ಜೆ.ಡಿ.ಪ್ರಕಾಶ್, ಇಟ್ಟಿಗುಡಿ ಮಂಜುನಾಥ್, ಹಳ್ಳಿ ನಾಗರಾಜ್, ಹನುಮಂತಪ್ಪ, ಮಣಿಕಂಠ ಸೇರಿದಂತೆ ಇತರರು ಇದ್ದರು.