ದಾವಣಗೆರೆ, ಫೆ.13- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸುವುದು ಖಚಿತವಾಗಿದ್ದು, ಹಾಲಿ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಅವರು ತಮ್ಮ ಪರ ಇರುತ್ತಾರೆಂಬ ವಿಶ್ವಾಸ ತಮ್ಮದಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
106 ವರ್ಷಗಳ ಸುದೀರ್ಘ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ಬೆಳೆಸುವ ಬಗ್ಗೆ ನನಗೆ ಅಪಾರ ಗೌರವ, ಶ್ರದ್ಧೆ, ಕಾಳಜಿ, ಬದ್ಧತೆ ಮತ್ತು ಅನುಭವ ಇದೆ. ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ. ಎಲ್ಲರ ಒಡಗೂಡಿ ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ ರೂಢಿಸಿಕೊಂಡಿದ್ದೇನೆ ಎಂದು ಅವರು ಹೇಳಿದರು.
2008-12 ರವರೆಗೆ ಹಾಗೂ 2016-21 ರವರೆಗೆ 2 ಅವಧಿಗೆ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ತಮ್ಮ ಅಧಿಕಾರವಧಿಯಲ್ಲಿ ಮಾಯಕೊಂಡ, ಬಾಡ, ಹದಡಿಯ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ ಆತ್ಮ ತೃಪ್ತಿ ಇದೆ ಎಂದು ಹೇಳಿದರು.
ಮುಂದಿನ ಗುರಿಗಳು : ಕನ್ನಡ ನಾಡು-ನುಡಿ, ನೆಲ-ಜಲ, ಸಾಹಿತ್ಯ-ಕಲೆ-ಸಂಸ್ಕೃತಿ ಹಾಗೂ ಸಾಂಸ್ಕೃತಿಕ ವೈಭವ ಪರಂಪರೆಗಳನ್ನು ಪ್ರಜ್ವಲಿಸುವಂತಹ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ಿನ ಆಶಯಗಳ ಚೌಕಟ್ಟಿನಲ್ಲಿ ಬದ್ಧತೆ ಹಾಗೂ ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನೆನೆಗುದಿಗೆ ಬಿದ್ದಿರುವ ವಿಶ್ವ ಕನ್ನಡ ಸಮ್ಮೇಳನ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಯಲ್ಲೇ ಸಂಘಟಿಸುವ ಅಚಲ ವಿಶ್ವಾಸ ಹೊಂದಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷ ಬಿ.ಎಂ. ಸದಾಶಿವಪ್ಪ ಶ್ಯಾಗಲೆ, ಇತರೆ ಪದಾಧಿಕಾರಿಗ ಳಾದ ಎಸ್.ಟಿ. ಶಾಂತಗಂಗಾಧರ, ಶರಣಾರ್ಥಿ ಬಕ್ಕಪ್ಪ, ಕಿತ್ತೂರು ಕೊಟ್ರಪ್ಪ, ಡಾ. ಹೆಚ್.ವಿ. ವಾಮದೇವಪ್ಪ, ಎಸ್.ಎಂ. ಮಲ್ಲಮ್ಮ, ನಾಗರಾಜ್, ಜಗದೀಶ್, ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ, ಸಾಲಿಗ್ರಾಮ ಗಣೇಶ್ ಶೆಣೈ, ಮಾಳಿಗೇರ ಷಡಾಕ್ಷರಪ್ಪ ಇದ್ದರು.