ದಾವಣಗೆರೆ, ಫೆ.13- ಪರಿಶಿಷ್ಟ ಪಂಗಡದ ಸಮುದಾಯದವರು ಅಂತರ್ಜಾತಿ ವಿವಾಹವಾದಲ್ಲಿ ಪ್ರೋತ್ಸಾಹ ಧನವನ್ನು ಹೆಚ್ಚಿಸುವ ಕುರಿತಾಗಿ ಸರ್ಕಾರ ಷರತ್ತುಗಳಿಗೆ ಒಳಪಟ್ಟು ಮಂಜೂರಾತಿ ನೀಡಿ ಆದೇಶಿಸಿದೆ.
ಪರಿಶಿಷ್ಟ ಪಂಗಡದ ಪುರುಷರು ಬೇರೆ ಜಾತಿಯ ಹೆಣ್ಣು ಮಕ್ಕಳನ್ನು ಮದುವೆ ಆದಲ್ಲಿ 2.50 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು. ಇತರೆ ಸವರ್ಣೀಯ ಜಾತಿಯ ಹೆಣ್ಣು ಪರಿಶಿಷ್ಟ ಪಂಗಡದ ಪುರುಷರನ್ನು ವಿವಾಹವಾದಲ್ಲಿ ಒಂದೇ ಕಂತಿನಲ್ಲಿ 2.50 ಲಕ್ಷಗಳಲ್ಲಿ 1.25 ಲಕ್ಷಗಳನ್ನು ದಂಪತಿ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ಆರ್‌ಟಿಜಿಎಸ್ ಮೂಲಕ ನೀಡುವುದು ಮತ್ತು 1.25 ಲಕ್ಷಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಇಡತಕ್ಕದ್ದು.
ಪರಿಶಿಷ್ಟ ಪಂಗಡದ ಹೆಣ್ಣು ಇತರೆ ಸವರ್ಣೀಯ ಜಾತಿಯ ಪುರುಷರನ್ನು ವಿವಾಹವಾದಲ್ಲಿ ಒಂದೇ ಕಂತಿನಲ್ಲಿ 3 ಲಕ್ಷ ರೂ.ಗಳಲ್ಲಿ 1.50 ಲಕ್ಷ ರೂ.ಗಳನ್ನು ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ನೀಡುವುದು. ಮತ್ತು 1.50 ಲಕ್ಷ ರೂ.ಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಯನ್ನು ದಂಪತಿಯ ಹೆಸರಿನಲ್ಲಿ ಇಡತಕ್ಕದ್ದು. ಪ್ರೋತ್ಸಾಹ ಧನ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.