ಪತ್ರಕರ್ತ ಬಿ.ಎನ್.ಮಲ್ಲೇಶ್
ದಾವಣಗೆರೆ, ಏ.15- `ಭಾರತ ಸ್ವತಂತ್ರವಾಗಿ ಮುಕ್ಕಾಲು ಶತಮಾನವೇ ಆಗುತ್ತಾ ಬಂದರೂ ಡಾ.ಅಂಬೇಡ್ಕರ್ ಕಂಡ ಸಮ ಸಮಾಜ ನಿರ್ಮಾಣದ ಕನಸು, ಕನಸಾಗಿಯೇ ಇರುವಲ್ಲಿ ರಾಜಕಾರಣಿಗಳ ತಂತ್ರಗಾರಿಕೆಯನ್ನು ಜನಸಾಮಾ ನ್ಯರು ಅರಿವು ಮಾಡಿಕೊಳ್ಳದಿದ್ದರೆ ಅಭ್ಯುದಯ ವೆಂಬುದು ಮರೀಚಿಕೆಯಾದೀತು’ ಎಂದು ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಎಚ್ಚರಿಸಿದರು.
ಕೆ.ಟಿ.ಜೆ.ನಗರದ ಕಲಾಭಿಮಾನಿಗಳ
ಸಾಂಸ್ಕೃತಿಕ ವೇದಿಕೆ `ಸ್ವರ ಸಮ್ಮಿಲನ’ ವ್ಯವಸ್ಥೆ ಗೊಳಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಲ್ಲೇಶ್ ಮಾತನಾಡುತ್ತಿದ್ದರು.
`ಮನುಷ್ಯನನ್ನು ಮನುಷ್ಯನಾಗಿ ಕಾಣದ, ಸಮಾಜದ ಅಸಮಾನತೆಯನ್ನು ಧಿಕ್ಕರಿಸಿ, ಅಂಬೇ ಡ್ಕರ್ ಅಂದೇ ಆರಂಭಿಸಿದ ಶಿಕ್ಷಣ – ಸಂಘಟನೆ – ಹೋರಾಟ ಇಂದು ದೇದೀಪ್ಯಮಾನ ವಾಗಿ ಬೆಳ ಗುತ್ತಿದ್ದರೂ, ತುಳಿತಕ್ಕೀಡಾದವರಲ್ಲಿ ಸ್ವಾಭಿಮಾನದ ಕಾವು ಏರದೆ ಫಲಪ್ರದವಾಗದು’ ಎಂದ ಮಲ್ಲೇಶ್ `ಅಂಬೇಡ್ಕರ್ ರಚಿಸಿದ ಸಂವಿದಾನಕ್ಕೆ ಸಣ್ಣ – ಪುಟ್ಟ ತಿದ್ದುಪಡಿ ಮಾಡಬಹುದೇ ವಿನಃ ಪೂರ್ಣ ಸಂವಿಧಾನವನ್ನೇ ಬದಲಿಸಿಬಿಡುತ್ತೇವೆಂಬ ಕೆಲವರ ಹುಚ್ಚುತನದ ಮಾತುಗಳಿಗೆ ಅರ್ಥವಿಲ್ಲ’ ಎಂದರು.
ವಕೀಲರುಗಳಾದ ಬಿ.ಎಂ.ಹನುಮಂತಪ್ಪ, ಅನೀಸ್ ಪಾಶ, ಕಾಂಗ್ರೆಸ್ ಮುಖಂಡ ಸೋಮಲಾಪುರದ ಹನುಮಂತಪ್ಪ ಮೊದಲಾದವರು ಮಾತನಾಡಿದರು. ಹಾವೇರಿ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಸುನಂದಾ ದುರ್ಗೇಶ್, ನಗರ ಪಾಲಿಕೆ ಸದಸ್ಯೆ ಶ್ರೀಮತಿ ಯಶೋಧ ಹೆಗ್ಗಪ್ಪನವರ್ ಮುಖ್ಯ ಅತಿಥಿಗಳಾಗಿದ್ದರು. ಡಾ.ಹೆಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
ಪ್ರಾರಂಭದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕಿ ಕುಮಾರಿ ತನ್ಮಯ ತಂಡದಿಂದ ಪ್ರಾರ್ಥನೆ, ಐರಣಿ ಚಂದ್ರು ಅವರಿಂದ ಕ್ರಾಂತಿ ಗೀತೆ ನಂತರ ಸ್ವಾಗತಿಸಿದ ಅಡ್ವೊಕೇಟ್ ದುರ್ಗೇಶ್ ಗುಡಿಗೇರಿಯವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ `ಭಾರತಾಂಬೆ’ ಎಂಬ ಕಿರುನಾಟಕ ಪ್ರದರ್ಶಿಸಲಾಯಿತು.
ಇತ್ತೀಚೆಗೆ ಬಿಡುಗಡೆಯಾದ `ಪಾರು’ ಚಿತ್ರದ ನಿರ್ಮಾಪಕ – ನಿರ್ದೇಶಕ ಹನುಮಂತ ಪೂಜಾರ್ ಅವರು ಚಿತ್ರದ ಪ್ರಧಾನ ಬಾಲ ಕಲಾವಿದೆ ಹಿತೈಷಿ, ಡ್ಯಾನ್ಸ್ ನಿರ್ದೇಶಕ ಹರ್ಷ ಸೇರಿದಂತೆ ತಂಡದೊಂದಿಗೆ ಪಾಲ್ಗೊಂಡು ವಿಶೇಷ ಕಳೆಗಟ್ಟಿಸಿದರು.