ಬೆಂಗಳೂರು, ಫೆ. 13- ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ 42 ಹಿರಿಯ ಅಧಿಕಾರಿಗಳನ್ನು ಸರ್ಕಾರ ಇಂದಿಲ್ಲಿ ವರ್ಗಾವರ್ಗಿ ಮಾಡಿದೆ.
ದಾವಣಗೆರೆ ಜಿಲ್ಲಾ ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿಯಾಗಿ ವಿಜಯ ಮಹಾಂತೇಶ್ ಬಿ. ದಾನಮ್ಮನವರ್ ಅವರನ್ನು ನೇಮಿಸಲಾಗಿದೆ. ಪ್ರಸಕ್ತ ಅವರು ಮುಖ್ಯ ಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಯಾಗಿದ್ದಾರೆ.
ಜಿಲ್ಲಾ ಪಂಚಾಯ್ತಿ ಸಿಇಒ ಆಗಿರುವ ಪದ್ಮಾ ಬಸವಂತಪ್ಪ ಅವರನ್ನು ವರ್ಗಾಯಿಸಲಾಗಿದೆಯಾದರೂ, ನೂತನ ಹುದ್ದೆಯನ್ನು ತಿಳಿಸಿಲ್ಲ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಆಗಿದ್ದವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದೆ.
ಪಾಲಿಕೆಯ ಕಮೀಷನರ್ ಆಗಿದ್ದ ಮಂಜುನಾಥ್ ಪ್ರಸಾದ್, ಹಿರಿಯ ಕಾರ್ಯದರ್ಶಿ ಮಟ್ಟದ ಅಧಿಕಾರಿ, ಆದರೆ ಅವರಿಗೆ ವರ್ಗಾವಣೆ ಮಾಡಿ ಜಿಲ್ಲಾಧಿಕಾರಿ ಸ್ಥಾನಮಾನ ನೀಡಿದೆ.
ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಡಾ. ಎಂ.ಆರ್. ರವಿ ಅವರನ್ನು ಸಕಾಲ ಮಿಷನ್ಗೆ ವರ್ಗಾವಣೆ ಮಾಡಲಾಗಿದೆ. ರವಿ ಅವರಿದ್ದ ತೆರವಾದ ಸ್ಥಾನಕ್ಕೆ ಡಾ. ಬಿ.ಸಿ. ಸತೀಶ್ ಅವರನ್ನು ನೇಮಿಸಿದೆ. ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ವಿ. ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಎಸ್. ಅಶ್ವತಿ ಅವರನ್ನು ನೇಮಕ ಮಾಡಲಾಗಿದೆ.