ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ
ಹೂವಿನಹಡಗಲಿ, ಫೆ.14- ಸುಪ್ರಸಿದ್ಧ ತಾಲ್ಲೂಕಿನ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಕೋವಿಡ್-19 ರ ಮಾರ್ಗಸೂಚಿ ಅನ್ವಯ ಸರಳ ರೀತಿಯಲ್ಲಿ ಆಚರಿಸಲು ಜಿಲ್ಲಾಡಳಿತ ಆದೇಶಿಸಿದೆ.
ಈ ಬಾರಿ ಮೈಲಾರ ಜಾತ್ರೆಗೆ `ಕೊರೊನಾ’ ಕರಿ ನೆರಳು ಬಿದ್ದಿದ್ದು ಪರಸ್ಥಳದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಈ ಬಗ್ಗೆ ಮೈಲಾರದಲ್ಲಿ ಜಿಲ್ಲಾಡಳಿತ ನಡೆಸಿದ ಜಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಪವನ್‌ಕುಮಾರ್ ಅವರು, ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖ ಕಂಡಿದ್ದರೂ ಸಹ ಶೇ.75 ರಷ್ಟು ಲಸಿಕೆ ತಲುಪುವವರಿಗೆ ಕೋವಿಡ್ ಮಾರ್ಗಸೂಚಿ ಪಾಲನೆ ಅನಿವಾರ್ಯ ಎಂದರು.
ಜಾತ್ರೆ ಮತ್ತು ಕಾರಣಿಕ ಆಲಿಸಲು ಲಕ್ಷಾಂತರ ಭಕ್ತರು ಸೇರುವ, ಆಗಮಿಸುವ ಸಾಧ್ಯತೆ ಇರುವುದರಿಂದ ಸಾಂಕ್ರಾಮಿಕ ರೋಗ ವ್ಯಾಪಿ ಸಲು ಸಾಧ್ಯತೆ ಇರುತ್ತದೆ. ಜನಾರೋಗ್ಯದ ದೃಷ್ಟಿಯಿಂದ ಈ ಬಾರಿಯ ಸರಳ ಆಚರಣೆಗೆ ಸಹಕರಿಸುವಂತೆ ಭಕ್ತರಲ್ಲಿ ವಿನಂತಿಸಿಕೊಂಡರು.
ಜಾತ್ರೆಯಲ್ಲಿ ನಾಟಕ, ಮನರಂಜನೆಯ ಆಟಗಳು, ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲು ಆಗುವುದಿಲ್ಲ ಎಂದು ತಿಳಿಸಿದರು. ಮಾಧ್ಯಮದ ಮೂಲಕ ವೀಕ್ಷಣೆ ಮಾಡಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರು, ಮೈಲಾರ ಕಾರಣಿಕಕ್ಕೆ ಶತಮಾನದ ಇತಿಹಾಸವಿದೆ. ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಅಭಿಪ್ರಾಯ ಪಡೆಯದೇ ಜಾತ್ರೆಗೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೇಳಿದರು.
ಶ್ರೀ ಗುರು ವೆಂಕಪ್ಪಯ್ಯ ಒಡೆಯರ್, ಜಿ.ಪಂ. ಸಿಇಒ ನಂದಿನಿ, ಎಸ್ಪಿ ಸೈದುಲ್ಲಾ ಅದಾಲತ್ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಎಂ.ಹೆಚ್. ಪ್ರಕಾಶ್‌ರಾವ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.