ದಾವಣಗೆರೆ, ಫೆ.14- ಅಡಿಕೆ ಮರಗಳಲ್ಲಿ ಬಿಸಿಲಿನಿಂದ ಕಾಂಡ ಸೀಳುವ ಸಂಭವವಿದ್ದು, ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತೋಟಗಾರಿಕೆ ಇಲಾಖೆ ಸಲಹೆಗಳನ್ನು ನೀಡಿದೆ.
ಸೂರ್ಯನ ಕಿರಣಗಳು ನೈರುತ್ಯ ದಿಕ್ಕಿನಿಂದ ನೇರವಾಗಿ ಅಡಿಕೆ ಮರಗಳ ಮೇಲೆ ಬೀಳುವುದರಿಂದ ಕಾಂಡಗಳು ಸುಟ್ಟಂತಾಗಿ ಸೀಳುತ್ತವೆ. ಕಾಂಡದ ಎಳೆಯ ಭಾಗ ಬಂಗಾರದ ಹಳದಿ ಬಣ್ಣಕ್ಕೆ ಮಾರ್ಪಟ್ಟು ನಂತರದಲ್ಲಿ ಬಿರುಕುಗಳು ಕಾಣಿಸಿಕೊಂಡು ಕಾಂಡಗಳು ಬಲಹೀನವಾಗುತ್ತವೆ. ಇಂತಹ ಬಿರುಕುಗಳ ಮೂಲಕ ರೋಗಾಣುಗಳು ಒಳಗೆ ಸೇರಿಕೊಂಡು ರೋಗ ತಗುಲುವ ಸಾಧ್ಯತೆ ಹೆಚ್ಚಾಗಿದ್ದು ಬಲವಾದ ಗಾಳಿ ಬೀಸಿದಾಗ ಮರಗಳು ಮುರಿದು ಬೀಳುತ್ತವೆ.
ಸೂರ್ಯನ ಬೇಗೆಯಿಂದ ಮರದ ಕಾಂಡಗಳು ಸೀಳುವುದನ್ನು ತಪ್ಪಿಸಲು ತೋಟದ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎತ್ತರಕ್ಕೆ ಬೆಳೆಯುವ ನೆರಳು ಸಸ್ಯಗಳನ್ನು ಬೆಳೆಸಬೇಕು. ಸಸಿಗಳನ್ನು ನೆಡುವಾಗ ಸರಿಯಾದ ದಿಕ್ಕಿನಲ್ಲಿ ನಾಟಿ ಮಾಡಿ ನೆರಳನ್ನು ಒದಗಿಸಬೇಕು ಹಾಗೂ 10 ಕೆ.ಜಿ. ಸುಣ್ಣ, 2 ಕೆ.ಜಿ ಬೆಲ್ಲ ಮತ್ತು ಅರ್ಧ ಕೆ.ಜಿ ಮೈದಾ ಹಿಟ್ಟನ್ನು ನೀರಿನಲ್ಲಿ ಬೆರೆಸಿ ಮಿಶ್ರಣವನ್ನು ಕಾಂಡಗಳಿಗೆ ಬಳಿಯುವುದರಿಂದ ಮರಗಳನ್ನು ಸೂರ್ಯನ ಅತಿಯಾದ ತಾಪದಿಂದ ರಕ್ಷಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಯವರನ್ನು ಅಥವಾ ವಿಷಯ ತಜ್ಞರು, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ದಾವಣಗೆರೆ ಇವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.