ಕೆಎಸ್ಸಾರ್ಟಿಸಿ ಬಸ್‍ಗಳ ಸಂಚಾರ ಪುನರಾರಂಭ

ಕೆಎಸ್ಸಾರ್ಟಿಸಿ ಬಸ್‍ಗಳ ಸಂಚಾರ ಪುನರಾರಂಭ - Janathavaniದಾವಣಗೆರೆ, ಏ.14- ಸಾರಿಗೆ ನೌಕರರ ಮುಷ್ಕರ 8ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ದಾವಣಗೆರೆ ವಿಭಾಗದಿಂದ ಸುಮಾರು 44 ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿವೆ. ಪ್ರಯಾಣಿಕರು ಸಹ ಸರ್ಕಾರಿ ಬಸ್ ಗಳ ಮೊರೆ ಹೋಗಿದ್ದಾರೆ.

ಸರ್ಕಾರಿ ಬಸ್ ಗಳಿಲ್ಲದೇ ಖಾಸಗಿ ಬಸ್ ಗಳ ಮೇಲೆ ಅವಲಂಬಿತರಾಗಿದ್ದ ಪ್ರಯಾಣಿಕರು ಇದೀಗ ಸರ್ಕಾರಿ ಬಸ್ ಗಳತ್ತ ಮುಖ ಮಾಡಿದ್ದಾರೆ. ದಾವಣಗೆರೆ-ಹರಿಹರ, ಚಿತ್ರದುರ್ಗ, ಶಿವಮೊಗ್ಗ, ಹರಪನಹಳ್ಳಿ, ಹುಬ್ಬಳ್ಳಿ, ರಾಣೆಬೆನ್ನೂರು, ಬೆಂಗಳೂರು, ಹೊಸಪೇಟೆ ಮಾರ್ಗಗಳಲ್ಲಿ ಸಾರಿಗೆ ಬಸ್ ಗಳು ಸಂಚಾರ ಮಾಡುತ್ತಿವೆ. ಇಂದು ಸಹ ತಾತ್ಕಾಲಿಕ ಸಾರಿಗೆ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ಗಳು ಸಹ ಖಾಸಗಿ ಬಸ್‌ಗಳ ನಡುವೆಯೇ ಪ್ರಯಾ ಣಿಕರನ್ನು ಹತ್ತಿಸಿಕೊಂಡು ಮಾರ್ಗಗಳಲ್ಲಿ ಸಂಚರಿಸಲು ಸಿದ್ಧವಾಗಿ ನಿಂತಿದ್ದು ಕಂಡು ಬಂತು. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿತ್ತು.

ಮೂರು ಕೋಟಿಯಷ್ಟು ನಷ್ಟ: ಯುಗಾದಿ ಹಬ್ಬ, ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ದಾವಣಗೆರೆ ಕೆಎಸ್‍ಆರ್‍ಟಿಸಿ ವಿಭಾಗಕ್ಕೆ ಭರಪೂರ ಆದಾಯ ಬರುತ್ತಿತ್ತು. ಆದರೆ, ಕಳೆದ 8 ದಿನಗಳಲ್ಲಿ ಸಾರಿಗೆ ಬಸ್ ಗಳ ಸಂಚಾರ ಕಾಣದೇ ಶಿವಮೊಗ್ಗ ವಿಭಾಗಕ್ಕೊಳಪಡುವ ಹೊನ್ನಾಳಿ ಡಿಪೋಗೆ ಸುಮಾರು 32 ಲಕ್ಷ ಸೇರಿದಂತೆ ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿಗೆ ಸುಮಾರು 3.32 ಕೋಟಿ ರೂ. ನಷ್ಟ ಉಂಟಾಗಿದೆ.

ಮುಷ್ಕರ ಬೆನ್ನಲ್ಲೇ ದಿನ ದಿನಕ್ಕೂ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದ ಭಾರ ಹೆಚ್ಚುತ್ತಲೇ ಸಾಗಿದೆ. ಮುಷ್ಕರ ಆರಂಭದಿಂದ ಈವರೆಗೆ ಒಟ್ಟು 44 ಬಸ್ಸುಗಳು ರಸ್ತೆಗಿಳಿದಿದ್ದು, ಸುಮಾರು 50 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. 3-4 ದಿನಗಳ ಹಿಂದೆ 19 ಜನ ಮುಂಚೂಣಿ ಹೋರಾಟಗಾರರಾಗಿದ್ದ ನೌಕರರನ್ನು ಸಂಸ್ಥೆಯ ಕೇಂದ್ರ ಸಮಿತಿ ಬೇರೆಡೆ ವರ್ಗಾವಣೆ ಮಾಡಿದ ಬೆನ್ನಲ್ಲೇ ದಾವಣಗೆರೆ ವಿಭಾಗದಲ್ಲಿ ಕೆಲ ನೌಕರರು ಕರ್ತವ್ಯಕ್ಕೆ ಮರಳುವತ್ತ ಚಿತ್ತ ಹರಿಸಿದ್ದಾರೆ.

ಖಾಸಗಿ ಬಸ್ ಚಾಲಕರ ಆಕ್ಷೇಪ : ಬುಧವಾರ ದಿಢೀರ್‍ರಾಗಿ ಕೆಎಸ್‍ಆರ್‍ಟಿಸಿಯ ಒಂಭತ್ತು ಬಸ್‍ಗಳ ಸಂಚಾರ ಮಾಡಿದ್ದರಿಂದ ಖಾಸಗಿ ಬಸ್ ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ, ರಾಣೇಬೆನ್ನೂರು, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಬಸ್‍ಗಳ ಸಂಚಾರದಲ್ಲಿನ ಸಂಖ್ಯೆ ಹೆಚ್ಚಾಗಿತ್ತು. ಇದಕ್ಕೆ ಖಾಸಗಿ ಬಸ್ ಚಾಲಕರು ಕೆಎಸ್‍ಆರ್‍ಟಿಸಿ ಅಧಿಕಾರಿಗಳ ಹತ್ತಿರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವುಗಳು ಕಳೆದ ಐದು ದಿನಗಳಿಂದ ಜನರ ಸೇವೆಗೆ ಮುಂದಾಗಿದ್ದೇವೆ. ಆದರೂ ಜನರು ಬರುತ್ತಿಲ್ಲ. ಈ  ಸಂದರ್ಭ ದಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಮುಂದಾ ಗಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ.

ಹೀಗೆ ದಿಢೀರ್ ಬಸ್ ಗಳ ಸಂಚಾರ ಆರಂಭಿಸಿದರೆ ನಮಗೆ ತೊಂದರೆಯಾಗಲಿದ್ದು, ಸಂಪೂರ್ಣ ಸಾರಿಗೆ ಬಸ್ ಸಂಚಾರವನ್ನೇ ಆರಂಭಿಸಿ, ಇಲ್ಲವೆ ನಮಗೇ ಅವಕಾಶ ಕೊಡಿ ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಹೇಳಿದ್ದಾರೆ. ಅದಕ್ಕೆ ಅಧಿಕಾರಿಗಳು ತಮಗೆ ಅವಕಾಶ ನೀಡಿರುವುದು ಸಾರಿಗೆ ಸಂಸ್ಥೆಯಾಗಿದ್ದು, ಅದನ್ನು ಮನಗಾಣಿ ಎಂಬುದಾಗಿ ತಿಳುವಳಿ ಮೂಡಿಸಿದ್ದಾರೆ.

ಸಾರಿಗೆ ಬಸ್ ಓಡಿಸುವ ಅಧಿಕಾರಿಗಳ ವಾಹನ ಚಾಲಕರು !

ಸರ್ಕಾರಿ ಬಸ್ ಗಳ ಓಡಿಸಲು ಬೇಡಿಕೆ ಈಡೇರಿಕೆಯ ಪಟ್ಟು ಬಿಡದ ಇನ್ನೂ ಕೆಲ ನೌಕರರು ಮನಸ್ಸು ಮಾಡಿಲ್ಲ. ಹೀಗಾಗಿ ಸಾರಿಗೆ ಬಸ್ ಗಳ ಸಂಚಾರಕ್ಕೆ ಕೆಎಸ್ ಆರ್ ಟಿಸಿ ತನ್ನ ಇಲಾಖೆಯ ಅಧಿಕಾರಿಗಳ ವಾಹನಗಳ ಚಾಲಕರನ್ನೇ ಬಸ್ ಚಾಲಕರು ಮತ್ತು ನಿರ್ವಾಹಕರನ್ನಾಗಿ ಸೇವೆಗೆ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಜನತಾವಾಣಿಗೆ ಪತ್ರಿಕ್ರಿಯೆ ನೀಡಿರುವ ಕೆಎಸ್ ಆರ್ ಟಿಸಿ ಡಿಸಿ ಸಿದ್ದೇಶ್ ಹೆಬ್ಬಾಳ್, ಅಧಿಕಾರಿಗಳ ವಾಹನಗಳ ಚಾಲಕರನ್ನು ಸೇವೆಗೆ ಬಳಸಿಕೊಳ್ಳುತ್ತಿಲ್ಲವೆಂದು ಒಂದು ಕಡೆಯಿಂದ ಅಲ್ಲಗಳೆದಿದ್ದು, ವಾಹನ ಚಾಲಕರು ಸಹ ಸಾರಿಗೆ ನೌಕರರಾಗಿದ್ದು, ಅವರನ್ನು ಬಸ್ ಗಳ ಸಂಚಾರಕ್ಕೆ ಬಳಸಿಕೊಳ್ಳುವಲ್ಲಿ ತಪ್ಪಿಲ್ಲ ಎಂಬುದಾಗಿಯೂ ಹೇಳಿದ್ದಾರೆ. 

error: Content is protected !!