ಬಣ್ಣದ ಶರ್ಟ್ ಬಟನ್‌ನಲ್ಲಿ ಅರಳಿದ ಮಹಾನಾಯಕ

ಬಣ್ಣದ ಶರ್ಟ್ ಬಟನ್‌ನಲ್ಲಿ ಅರಳಿದ ಮಹಾನಾಯಕ - Janathavaniದಾವಣಗೆರೆ, ಏ.14- ತರಗತಿ ಕೋಣೆಯಲ್ಲಿ ಬಡ ವಿದ್ಯಾರ್ಥಿ ಶರ್ಟ್ ಬಟನ್ ಇಲ್ಲದೇ ಅನುಭವಿಸಿದ ಅವಮಾನವನ್ನು ತನ್ನ ಕಲಾ ಪ್ರತಿಭೆಯ ಮುಖೇನ ಯುವ ಕಲಾವಿದ ಅರಳಿಸಿ ಗಮನ ಸೆಳೆದಿದ್ದಾನೆ.

ತರಬೇತಿ ಪಡೆಯದಿದ್ದರೂ ಅನುಭವಿ ಕಲಾವಿದನಂತೆ ಮಹಾನಾಯಕನ ಚಿತ್ರವನ್ನು ಕಲೆಯಲ್ಲಿ ಅನಾವರಣಗೊಳಿಸಿರುವುದು ನಗರದ  ಭಾರತ್ ಕಾಲೋನಿ ಯುವಕ ಪ್ರದೀಪ್ ದೂದಾನಿ ಎಂಬ ಕಲಾವಿದ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಅಂತಿಮ ವರ್ಷದ ಬಿ.ಕಾಂ. ಓದುತ್ತಿದ್ದು, 30 ಸಾವಿರ ಬಣ್ಣ ಬಣ್ಣದ ಶರ್ಟ್ ಬಟನ್ ಗಳಿಂದ ಐದು ಅಡಿ ಅಗಲ ಹಾಗೂ ಆರು ಅಡಿ ಉದ್ದದ ಅಂಬೇಡ್ಕರ್ ಭಾವಚಿತ್ರವನ್ನು ಬಿಡಿಸಿದ್ದು, ಅದನ್ನು  ಅಂಬೇಡ್ಕರ್ ರವರ 130 ನೇ ಹುಟ್ಟು ಹಬ್ಬಕ್ಕೆ ಕೊಡುಗೆಯಾಗಿ ನೀಡಿ ಇಡೀ ರಾಜ್ಯಕ್ಕೆ ಹೆಸರಾಗಿದ್ದಾನೆ.

ಸತತ ಮೂರು ದಿನಗಳ ಕಾಲ ಹಗಲು ರಾತ್ರಿ ಎನ್ನದೆ ಮುವ್ವತ್ತು ಸಾವಿರ ಶರ್ಟ್ ಬಟನ್ ಗಳಿಂದ ಚಿತ್ರ ಮೂಡಿ ಬಂದಿದ್ದು, ನಗರದ ಸಿದ್ದಗಂಗಾ ಶಾಲೆಯ ಆವರಣದಲ್ಲಿ ಕಂಗೊಳಿಸುತ್ತಿದೆ. ಅಲ್ಲದೆ ಇದನ್ನು ಒಂದು ಶಾರ್ಟ್ ಮೂವಿ ಮಾಡಿದ್ದಾರೆ.

ಇನ್ನು ಪ್ರದೀಪ್ ಟೈಪಿಂಗ್ ನಲ್ಲಿ ಚಿತ್ರ ಬಿಡಿಸುವುದು, ದೂರದಲ್ಲಿ ಚಿತ್ರ ಬಿಡಿಸುವುದನ್ನು ಕಲಿತಿದ್ದಾರೆ. ಯಾವುದೇ ತರಬೇತಿ ಶಾಲೆಗೆ ಹೋಗದೇ ಕೇವಲ ಯೂಟ್ಯೂಬ್ ನಲ್ಲಿ ನೋಡಿ ಈ ರೀತಿಯ ಕಲೆಯನ್ನು ಕರಗತ ಮಾಡಿಕೊಂಡು ಚಿತ್ರಗಳನ್ನು ಬಿಡಿಸಿದ್ದಾರೆ. ಅಲ್ಲದೆ ಲಾಕ್ ಡೌನ್ ಸಂದರ್ಭದಲ್ಲಿ ಬಾಲಿವುಡ್ ನಟ ಸೋನುಸೂದ್ ಕಾರ್ಮಿಕರಿಗೆ ಮಾಡಿದ ಸಹಾಯ ಸೇರಿದಂತೆ, ಅವರ ಸಾಮಾಜಿಕ ಕಳಕಳಿಯನ್ನು ನೋಡಿ ದಾರದಿಂದ ಭಾವ ಚಿತ್ರ ವನ್ನು ಬಿಡಿಸಿದ್ದಾರೆ. ಇದನ್ನು ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ನಲ್ಲಿ ನೋಡಿದ ಸೋನುಸೂದ್ ಪ್ರದೀಪ್ ನನ್ನು ತನ್ನಲ್ಲಿಗೆ ಕರೆಸಿಕೊಂಡು ಆ ಭಾವಚಿತ್ರವನ್ನು ಪಡೆದು ಸನ್ಮಾನ ಮಾಡಿದ್ದಾರೆ. 

error: Content is protected !!