ರಾಣೇಬೆನ್ನೂರು, ಏ.14- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದವರಲ್ಲಿ ನಿನ್ನೆ ನಾಲ್ವರು ವಾಪಸ್ ಪಡೆದಿದ್ದು, ಅಂತಿಮವಾಗಿ ಅಖಾಡದಲ್ಲಿ 4 ಜನ ನುಡಿ ಸೇವಕರು ಉಳಿದಿದ್ದಾರೆ.
ಪ್ರಥಮ ಬಾರಿಗೆ ಆಕಾಂಕ್ಷಿಗಳಾಗಿರುವ ರಾಣೇಬೆನ್ನೂರಿನ ವೆಂಕಟೇಶ ಈಡಿಗೇರ ಮತ್ತು ಪ್ರಭುಲಿಂಗಪ್ಪ ಹಲಗೇರಿ ಹಾಗೂ ಈಗಾಗಲೇ ಅಧಿಕಾರದ ಗದ್ದುಗೆ ಏರಿದ್ದ ಬ್ಯಾಡಗಿಯ ಎಚ್.ಬಿ. ಲಿಂಗಯ್ಯ ಹಾಗೂ ಹಾನಗಲ್ಲಿನ ಮಾರುತಿ ಶಿಡ್ಲಾಪೂರ ಮರು ಆಕಾಂಕ್ಷಿಗಳಾಗಿ ಕಣದಲ್ಲಿದ್ದಾರೆ.
ಜಿಲ್ಲೆಯಲ್ಲಿಯೇ ಹೆಚ್ಚು ಅಂದರೆ, 2 ಸಾವಿರಕ್ಕೂ ಅಧಿಕ ಮತದಾರರಿರುವ ರಾಣೇಬೆನ್ನೂರಿನಿಂದ ಇಬ್ಬರು, ಒಂದು ಸಾವಿರಕ್ಕೂ ಕಡಿಮೆ ಇರುವ ಬ್ಯಾಡಗಿ ಮತ್ತು ಹಾನಗಲ್ಲಿನಿಂದ ತಲಾ ಒಬ್ಬೊಬ್ಬರು ಸ್ಪರ್ಧಿಗಳಿದ್ದರೆ,2 ಸಾವಿರಕ್ಕೂ ಅಧಿಕ ಮತದಾರರಿರುವ ಹಾವೇರಿಯ ಎಲ್ಲ ಆಕಾಂಕ್ಷಿಗಳು ಕಣದಿಂದ ಹಿಂದೆ ಸರಿದಿದ್ದಾರೆ.
ಆಕಾಂಕ್ಷಿಗಳು ತಮ್ಮದೇ ಆದ ರೀತಿಯಲ್ಲಿ ಮತದಾರರ ಒಲವನ್ನು ಗಳಿಸುವ ಪ್ರಯತ್ನ ನಡೆಸಿದ್ದು, ಕಣದಲ್ಲಿ ಲಿಂಗಾಯತೇತರ, ಸಾಧು ಲಿಂಗಾಯತ, ಜಂಗಮರು, ಪಂಚಮಸಾಲಿ ಸಮಾಜದವರಿದ್ದಾರೆ ಎಂಬ ಜಾತಿ ಲೆಕ್ಕಾಚಾರವೂ ಕೇಳಿ ಬರುತ್ತಿದೆ.