ಮೀಸಲಾತಿ ಕಲ್ಪಿಸದಿದ್ದರೆ ಸಮಾವೇಶ ನಂತರವೂ ಧರಣಿ
ತುಮಕೂರು, ಫೆ. 10 – ಬರುವ ಫೆಬ್ರವರಿ 21ರಂದು ಬೆಂಗಳೂರಿನ ನೈಸ್ ರಸ್ತೆಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ನಡೆಯಲಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಸಮಾಜದ ಶಾಸಕರು, ಸಚಿವರು ಹಾಗೂ ಮುಖಂಡರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಶ್ರೀಗಳು, ಜ.14ರಂದು ಪಂಚ ಲಕ್ಷ ಪಾದಯಾತ್ರೆ ಕೂಡಲಸಂಗಮದಿಂದ ಹೊರಟಿತ್ತು. ಇದೇ ಮೊದಲ ಬಾರಿಗೆ ನಮ್ಮ ಸಮಾಜದ ಎಲ್ಲ ಶಾಸಕರು ಒಗ್ಗಟ್ಟು ತೋರಿ ಸಭೆ ನಡೆಸಿದ್ದಾರೆ. ಪಾದಯಾತ್ರೆಯಲ್ಲಿ ಸಮಾಜಕ್ಕೆ ಶಕ್ತಿ ಪ್ರದರ್ಶಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ 10 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದರು.
ಸಚಿವರಾದ ಮುರುಗೇಶ್ ನಿರಾಣಿ ಹಾಗೂ ಸಿ.ಸಿ. ಪಾಟೀಲ್ ಅವರು ಯಡಿಯೂರಪ್ಪ ಸರ್ಕಾರ ಮೀಸಲಾತಿ ಕೊಡಲಿದೆ ಎಂದಿದ್ದಾರೆ. ನಮ್ಮ ಸಮಾವೇಶ ನೋಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಂದು ಸಂಜೆಯೊಳಗೆ ಮೀಸಲಾತಿ ಘೋಷಿಸಲಿದ್ದಾರೆ ಎಂದು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಕೊಡದೇ ಇದ್ದರೆ ಸಮಾವೇಶದ ನಂತರವೂ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದವರು ಹೇಳಿದ್ದಾರೆ.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಇಂದು ನಡೆದ ಸಭೆಯಲ್ಲಿ ಇಬ್ಬರು ಸಚಿವರು ಮೀಸಲಾತಿ ಕೊಡಲು ಶ್ರಮಿಸುತ್ತೇವೆ ಎಂದಿದ್ದಾರೆ. ಸಮಾವೇಶದ ಪೂರ್ವದಲ್ಲಿ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಅಮರಣಾಂತ ಉಪವಾಸ ನಡೆಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.