ಹರಪನಹಳ್ಳಿ, ಜು.4- ಗೋವಾದಲ್ಲಿ ಕೆಲಸದ ನಿಮಿತ್ತ ಹೋಗಿದ್ದ ಬಿಜಾಪುರದ ಕನ್ನಡಿಗರ ಮೇಲೆ ಪೊಲೀಸರ ದೌರ್ಜನ್ಯದಿಂದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು, ಗೋವಾ ಪೊಲೀಸ್ ಕಿರುಕುಳ ಹಾಗೂ ದೌರ್ಜನ್ಯ ಸರಿಯಲ್ಲ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ರಾಮನಮಲಿ ತೀವ್ರವಾಗಿ ಖಂಡಿಸಿದ್ದಾರೆ.
ಗೋವಾದ ಜುವಾರಿ ನಗರದ ಎಂ.ಇ.ಎಸ್ ಕಾಲೇಜಿನ ಆವರ ಣದ ಬಾಡಿಗೆ ಮನೆಯೊಂದರಲ್ಲಿ ಹುಲುಗಪ್ಪ ಅಂಬಿಗೇರ (35), ಪತ್ನಿ ದೇವಮ್ಮ ಅಂಬಿಗೇರ (28), ಸಹೋದರ ಗಂಗಪ್ಪ ಅಂಬಿಗೇರ (29) ಆತ್ಮಹತ್ಯೆಗೆ ಶರಣಾದ ನತದೃಷ್ಟ ಕನ್ನಡಿಗರು. ಇವರು ಗೋವಾ ದಲ್ಲಿ ಕಳೆದ ಹಲವು ವರ್ಷಗಳಿಂದ ಕೂಲಿ ನಾಲಿ ಮಾಡುತ್ತಿದ್ದರು. ಬಾಡಿಗೆ ಇದ್ದ ಮಾಲೀಕನ ಮನೆಯಲ್ಲಿ ಬಂಗಾರ ಸೇರಿದಂತೆ 15 ಲಕ್ಷ ರೂ.ಗಳನ್ನು ದೇವಮ್ಮ ಕಳ್ಳತನ ಮಾಡಿದ್ದಾಳೆ ಎಂದು ಪೊಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪೊಲೀಸರು ಶರಣಾದ ಮೂವರು ದುರ್ದೈವಿಗಳಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಮನ ನೊಂದ ಮೂವರೂ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ವಿನಾಕಾರಣ ಕಳ್ಳತನ ಆರೋಪದ ಹಿನ್ನೆಲೆಯಲ್ಲಿ ಪೊಲೀಸರ ದಬ್ಬಾಳಿಕೆ ಹಾಗೂ ದೌರ್ಜನ್ಯದಿಂದ ನೇಣಿಗೆ ಶರಣಾದ ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು, ಸೂಕ್ತ ಪರಿಹಾರ ಮತ್ತು ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ.ರಾಮ್ಪ್ರಸಾದ ಗಾಂಧಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪರಿಷತ್ ಸದಸ್ಯ ಬಸವರಾಜ ಸಂಗಪ್ಪ ನವರ್, ಕನ್ನಡ ಸಾಹಿತ್ಯ ಪರಿಷತ್ನ ಕೆ.ಉಚ್ಚೆಂಗೆಪ್ಪ, ಹೇಮಣ್ಣ ಮೋರಿ ಗೇರಿ, ಸಿ.ಗಂಗಾಧರ್, ಇಸ್ಮಾಯಿಲ್ ಎಲಿಗಾರ್ ಒತ್ತಾಯಿಸಿದ್ದಾರೆ.