ಗ್ರೀನ್ ಬ್ರಿಗೇಡ್‌ನ ಅಧ್ಯಕ್ಷ ನಾಗರಾಜ್ ಸುರ್ವೆ
ದಾವಣಗೆರೆ, ಏ.11- ಸಂಸದರು ಹಾಗೂ ಜಿಲ್ಲಾಧಿ ಕಾರಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪರಿವೀಕ್ಷಿಸಿ, ಕೆರೆ ಅಭಿವೃದ್ಧಿ ಸರಿ ಇದೆ ಎಂದು ಸರ್ಟಿಫಿಕೇಟ್ ನೀಡಿರುವುದನ್ನು ಯುವ ಭಾರತ ಗ್ರೀನ್ ಬ್ರಿಗೇಡ್‌ನ ಅಧ್ಯಕ್ಷ ನಾಗರಾಜ್ ಸುರ್ವೆ ಖಂಡಿಸಿದ್ದಾರೆ.
ಸಂಸದರು ಕಾಮಗಾರಿ ಪರಿವೀಕ್ಷಿಸುವ ಮುನ್ನ ಡಿಪಿಆರ್‌ನಲ್ಲಿ ಒಮ್ಮೆ ನೋಡಬೇಕಿತ್ತು. ಪರಿಸರ ವಾದಿಗಳು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ಕೆರೆ ಕಾಮಗಾರಿಗೆ ಎಲ್ಲಾ ಸರ್ಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರ ಲಾಗಿದೆ. ಅವೈಜ್ಞಾನಿಕವಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಅನುಕೂಲ ಮಾಡಲು ಕಾಮಗಾರಿ ನಡೆಯುತ್ತಿದೆ ಎಂದು ಪ್ರತಿಭಟಿಸಿದವರ ಮಾತನ್ನೂ ಸಹ ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕನಿಷ್ಟ ಪಕ್ಷ ಹೋರಾಟಗಾರರಿಗೆ ಬಹಿರಂಗ ಆಹ್ವಾನ ನೀಡಿ, ಅವರ ವಾದವನ್ನು ಆಲಿಸುವ ಕೆಲಸ ಮಾಡಲಿಲ್ಲ. ಎಂದಿನಂತೆ ತಮ್ಮ ಪರಿಶೀಲನೆ ಮುಗಿಸಿ, ಅಧಿಕಾರಿಗಳು ಹೇಳಿದ ಮಾತುಗಳನ್ನು ಕೇಳಿ, ಎಲ್ಲಾ ಸರಿ ಇದೆ ಎಂದು ಸರ್ಟಿಫಿಕೇಟ್ ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.