ವಿಜಯನಗರ ಸಂಸ್ಥಾಪನಾ ದಿನಾಚರಣೆಗೆ ಅವಕಾಶ ನೀಡದಿರಲು ಮನವಿ

ಹರಪನಹಳ್ಳಿ, ಏ. 9 – ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರ ಸವಿನೆನಪು ಹಾಗೂ ಹಾಲುಮತ ಸಮಾಜದ ಸಂಸ್ಕೃತಿ ಬಿಂಬಿ ಸುವ ನಿಟ್ಟಿನಲ್ಲಿ ವಿಜಯನಗರ ಸಂಸ್ಥಾಪನಾ ದಿನದ ಆಚರಣೆ  ನಡೆಸಲು ಅವಕಾಶ ನೀಡಬಾರದು ಎಂದು ಪ್ರತಿಭಟಿಸಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ, ತಾಲ್ಲೂಕು ವಾಲ್ಮೀಕಿ ನಾಯಕ ಮಹಿಳಾ ಸಮಾಜ, ಏಕಲವ್ಯ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು.

 ಈ ವೇಳೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕಬುಕ್ಕರು ವಾಲ್ಮೀಕಿ ನಾಯಕ  ಸಮಾಜದ  ಕುಡಿಗಳಾಗಿರುತ್ತಾರೆ.  ಹೊಸಪೇಟೆಯ ಕುರುಬ ಸಮಾಜದ ಕಚೇರಿಯಲ್ಲಿ ಈಚೆಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕುರುಬ ಸಮಾಜದ ಸಭೆಯಲ್ಲಿ ಕಲ್ಬುರ್ಗಿ ವಿಭಾಗದ ಕನಕ ಗುರುಪೀಠ ಶಾಖಾ  ಮಠದ ಪೀಠಾಧಿ ಪತಿಗಳಾದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮಿಜೀಯವರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರ ಸವಿನೆನಪು ಹಾಗೂ  ಹಾಲುಮತ ಸಮಾಜದ ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ಇದೇ ಏಪ್ರಿಲ್ 18 ರಂದು ವಿಜಯನಗರ ಸಂಸ್ಥಾಪನಾ ದಿನಾಚರಣೆ  ಆಚರಿಸಲಾಗುವುದು ಎಂಬ ಹೇಳಿಕೆಯನ್ನು ನೀಡಿರುತ್ತಾರೆ. 

ಇವರ  ಹೇಳಿಕೆಯನ್ನು  ವಾಲ್ಮೀಕಿ ಗುರುಪೀಠ ಹಾಗೂ  ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ, ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಮಹಿಳಾ ಸಮಾಜ, ಏಕಲವ್ಯ ಸಂಘರ್ಷ ಸಮಿತಿ,  ತೀವ್ರವಾಗಿ ಖಂಡಿಸುತ್ತದೆ. ಹಕ್ಕಬುಕ್ಕರು ವಾಲ್ಮೀಕಿ ನಾಯಕ ಸಮುದಾಯಕ್ಕೆ  ಸೇರಿದವರು ಎಂದು ಬಲವಾಗಿ ಪ್ರತಿಪಾದಿಸುತ್ತಾ, ಕುಮಾರರಾಮನ ಅಕ್ಕನ ಮಕ್ಕಳೇ ಹಕ್ಕಬುಕ್ಕರು ಇವರ ತಂದೆ ಸಂಗಮರಾಯ ಎಂಬುದು ಇಂದಿಗೂ ಇತಿಹಾಸದಲ್ಲಿ ಉಲ್ಲೇಖವಾಗಿದೆ. 

ಇದನ್ನು ಅಲ್ಲಗಳೆದು ಇತಿಹಾಸವನ್ನು ತಿರುಚಿ, ಹಕ್ಕಬುಕ್ಕರು ಕುರುಬರು, ಹಾಲುಮತಸ್ಥರು ಎಂದು ವಾದಿಸುವುದು ಸರಿಯಲ್ಲ. ವಾಲ್ಮೀಕಿ ಹಾಗೂ ಕುರುಬ ಸಮಾಜಗಳ ಮಧ್ಯೆ ಕೋಮುಗಲಭೆ ಉಂಟಾಗುವ ಮೊದಲೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ತಾಲ್ಲೂಕು ವಾಲ್ಮೀಕಿ ನಾಯಕ ಮಹಿಳಾ ಸಮಾಜದ ಗೌರವ ಅಧ್ಯಕ್ಷೆ ಟಿ. ಪದ್ಮಾವತಿ,  ಏಕಲವ್ಯ  ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ರಾಯದುರ್ಗದ ಪ್ರಕಾಶ ಮಾತನಾಡಿದರು.

 ವಾಲ್ಮೀಕಿ ನಾಯಕ ಸಮಾಜದ  ಪ್ರಧಾನ ಕಾರ್ಯದರ್ಶಿ ಗಿರಜ್ಜಿ ನಾಗರಾಜ್, ನಿವೃತ್ತ ಮುಖ್ಯ ಶಿಕ್ಷಕ ಬಾಗಳಿ ಆನಂದಪ್ಪ,  ಸಂಘಟನೆಯ ಹುಲಿಕಟ್ಟಿ ಕುದರಿ ರಾಜಪ್ಪ, ನ್ಯಾಯವಾದಿ ಕೆ.ಎಂ. ಪ್ರಾಣೇಶ, ವಾಲ್ಮೀಕಿ ನಾಯಕ ಮಹಿಳಾ ಸಮಾಜದ ಕೆ. ದ್ರಾಕ್ಷಾಯಣಮ್ಮ, ಮಂಜುಳಾ, ಏಕಲವ್ಯ  ಸಂಘರ್ಷ ಸಮಿತಿಯ ಶಿವರಾಜ,  ಮಂಜುನಾಥ, ಎಂ. ಹರ್ಷ, ಗಿಡ್ಡಳ್ಳಿ ವಿಜಯಕುಮಾರ್, ಕುಮಾರ್ ಗೋವಿಂದ, ಕೃಷ್ಣ ಇನ್ನಿತರರಿದ್ದರು.

error: Content is protected !!