ದಾವಣಗೆರೆ, ಜು.2- ಕೊರೊನಾ ಸಂಕಷ್ಟದಲ್ಲಿರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಬಿಪಿಎಲ್ ಫಲಾನುಭವಿಗಳಿಗೆ ತಲಾ 10 ಸಾವಿರ ರೂ. ನೆರವನ್ನು ರಾಜ್ಯ ಸರ್ಕಾರ ನೀಡಬಹುದಾಗಿತ್ತು. ಆದರೆ, ಇದು ಸಂಪೂರ್ಣ ಶ್ರೀಮಂತರ ಪರವಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆರೋಪಿಸಿದ್ದಾರೆ.
ಇಂದಿಲ್ಲಿ ಬಾಪೂಜಿ ಎಂಬಿಎ ಹೆಲಿಪ್ಯಾಡ್‍ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಎಸ್‍ಸಿಪಿ, ಟಿಎಸ್‍ಪಿ ಯೋಜನೆ ಜಾರಿಗೆ ತರಲಾಯಿತು. ಇದರನ್ವಯ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಬಜೆಟ್‍ನ ಶೇ.24 ರಷ್ಟು ಹಣ ಎಸ್‍ಸಿ, ಎಸ್‍ಟಿ ಕಲ್ಯಾಣಕ್ಕಾಗಿ ಮೀಸಲಿರಿಸಲಾಗಿದೆ. ಈ ಹಣದಲ್ಲಿ ಕೋವಿಡ್ ಸಂಕಷ್ಟದಲ್ಲಿ ಬಿಪಿಎಲ್ ಫಲಾನುಭವಿಗಳಿಗೆ ತಲಾ ಹತ್ತು ಸಾವಿರ ರೂ. ನೆರವು ನೀಡಬೇಕಾಗಿತ್ತು. ಆದರೆ, ಬಿಜೆಪಿ ಸರ್ಕಾರ ದೀನ-ದಲಿತರು, ಬಡವರ ಬಗ್ಗೆ ಕಾಳಜಿ ಇಲ್ಲದಿರುವುದರಿಂದ ಈ ಕೆಲಸ ಮಾಡಿಲ್ಲ ಎಂದು ದೂರಿದರು. ಸಚಿವರ ಆಪ್ತ ಸಹಾಯಕರು ಬದ್ಧತೆ ಕಾಪಾಡಿಕೊಳ್ಳಬೇಕು. ಎಷ್ಟೋ ಸಲ ಸಚಿವರ ಸಹಿಯನ್ನು ಅವರ ಪಿಎಗಳೇ ಮಾಡಿರುತ್ತಾರೆ. ಹೀಗಾಗಿ, ಸಮಾಜ ಕಲ್ಯಾಣ ಇಲಾಖೆ ಸಚಿವರ ಆಪ್ತ ಸಹಾಯಕರಿಗೆ ಹಣ ವಸೂಲಿ ಮಾಡಲು ಹೇಳಿದವರು ಯಾರು ಎಂಬುದು ಗೊತ್ತಾಗಬೇಕು. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ಈಗ ಬಂಧಿಸಿರುವ ಸಚಿವರ ಪಿಎಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಬೇರೆ ಪಕ್ಷದ ಶಾಸಕರು, ಅಧಿಕಾರಿಗಳು ನಮ್ಮನ್ನು ಈಗಿನಿಂದಲೇ ಚೆನ್ನಾಗಿ ಮಾತನಾಡಲಾರಂಭಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಆದರೆ, ನಮ್ಮ ಮುಖಂಡರು ನಾಯಕತ್ವದ ಬಗ್ಗೆ ಗೊಂದಲ ಸೃಷ್ಟಿಸದೆ, ಕೊರೊನಾ ಸಂಕಷ್ಟದಲ್ಲಿ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್. ಬಸವಂತಪ್ಪ ಸೇರಿದಂತೆ ಇತರರು ಇದ್ದರು.