ದಾವಣಗೆರೆ, ಏ.8- ಕೇವಲ ಐದು ಜನಗಳ ಹೆಸರಿನಲ್ಲಿ ಇರುವ ನಗರದ ಪಿ.ಬಿ. ರಸ್ತೆಯಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜಾಗದ ಅಭಿವೃದ್ಧಿ ಟ್ರಸ್ಟ್ ರದ್ದುಪಡಿಸಿ, ಸಮಾಜದ ಸದಸ್ಯರನ್ನೊಳಗೊಂಡ ನೂತನ ಟ್ರಸ್ಟ್ ರಚನೆಗೆ ಕನಕ ಗುರುಪೀಠದ ಸ್ವಾಮಿಗಳು ಮುಂದಾಗಬೇಕೆಂದು ಕುರುಬ ಸಮಾಜದ ಮುಖಂಡ, ನಗರ ಸಭೆ ಮಾಜಿ ಅಧ್ಯಕ್ಷ ಎಂ.ಮಂಜುನಾಥ್ ಮನವಿ ಮಾಡಿದರು.
ರಾಜ್ಯದಲ್ಲಿ ನಮ್ಮ ಕುರುಬ ಸಮಾಜವನ್ನು ಪ್ರತಿನಿಧಿಸುವ ಶ್ರೀ ಕನಕ ಪೀಠವಿದೆ. ಸದರಿ ಪೀಠಕ್ಕೆ ಮಠಾಧೀಶರೂ ಇದ್ದಾರೆ. ಗೌರವಾನ್ವಿತ ಪೀಠಾಧ್ಯಕ್ಷರ ಮಾರ್ಗದರ್ಶನದಲ್ಲಿ ಇನ್ನು ಮುಂದೆ ಸದರಿ ಪ್ರದೇಶದ ಆಗು-ಹೋಗುಗಳನ್ನು ನಡೆಸುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದೆಂದು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕೇವಲ ನಾಲ್ಕು ವ್ಯಕ್ತಿಗಳಿರುವ ಟ್ರಸ್ಟನ್ನು ಕೂಡಲೇ ವಿಸರ್ಜಿಸಿ ಸದರಿ ಆಸ್ತಿಯನ್ನು ಸಮಾಜದ ಸುಪರ್ದಿಗೆ ಬಿಟ್ಟು ಕೊಡಬೇಕು. ಯಾವುದೇ ಕಾರಣಕ್ಕೂ ಈ ಆಸ್ತಿಯನ್ನು ಪರಭಾರೆ ಮಾಡುವ ಅಥವಾ ಈ ವಿಷಯದಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು ಎಂದರು.
ಈ ಎಲ್ಲಾ ಕಾರ್ಯಗಳು ಕುರುಬ ಸಮಾಜದ ಕನಕ ಪೀಠಾಧಿಪತಿಗಳಾದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ನಡೆಯಬೇಕು. ಇದಕ್ಕಾಗಿ ಶ್ರೀಗಳು ಈ ಕೂಡಲೇ ಸಮಾಜದ ಸಮಸ್ತರ ಸಭೆ ಕರೆದು ಚರ್ಚೆ ಮಾಡಬೇಕು.
ಈ ನಡುವೆ ಟ್ರಸ್ಟಿನ ಸದಸ್ಯರುಗಳು ಪ್ರಮುಖ ಮಠವೊಂದರ ಹಾಗೂ ದಾವಣಗೆರೆಯ ಶ್ರೀಮಂತ ವ್ಯಾಪಾರಿಯೊಬ್ಬರೊಡನೆ ಈ ಜಾಗವನ್ನು ಮಾರಾಟ ಮಾಡುವ ಕುರಿತು ಮಾತುಕತೆ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿರುತ್ತದೆ. ಈ ನಡೆಯು ಸಮಾಜ ವಿರೋಧಿಯಾಗಿದೆ. ಇವರ ನಡುವೆ ನಡೆದಿರಬಹುದಾದ ಅಥವಾ ನಡೆಯಬಹುದಾದ ಯಾವುದೇ ವ್ಯವಹಾರಗಳಿಗೆ ಸಮಾಜವು ಹೊಣೆಯಲ್ಲ. ಎಲ್ಲಾ ತರಹದ ಆರ್ಥಿಕ ನಷ್ಟಗಳಿಗೆ ಅವರೇ ಜವಾಬ್ದಾರರು ಎಂದು ಸ್ಪಷ್ಟಪಡಿಸಿದ್ದಾರೆ.