ದಾವಣಗೆರೆ, ಏ.6- ನಗರದ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳ 24 ಪ್ರಾಜೆಕ್ಟ್‌ಗಳು ಉತ್ತಮ ಎಂದು ಪರಿಗಣಿಸಲ್ಪಟ್ಟು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ನೀಡುವ ಹಣಕಾಸಿನ ನೆರವಿಗೆ ಆಯ್ಕೆಯಾಗಿವೆ.
ಸಿವಿಲ್ ವಿಭಾಗದಿಂದ 3, ಇ ಅಂಡ್ ಸಿ ವಿಭಾಗದಿಂದ 2, ಕಂಪ್ಯೂಟರ್ ವಿಭಾಗದಿಂದ 5, ಐಎಸ್ ವಿಭಾಗದಿಂದ 2, ಮೆಕ್ಯಾನಿಕಲ್ ವಿಭಾಗದಿಂದ 5, ಟೆಕ್ಸ್‌ಟೈಲ್ ವಿಭಾಗದಿಂದ 1, ಜೈವಿಕ ತಂತ್ರಜ್ಞಾನ ವಿಭಾಗದಿಂದ 2, ಎಲೆಕ್ಟ್ರಿಕಲ್ ವಿಭಾಗದಿಂದ 2 ಮತ್ತು ಇನ್‌ಸ್ಟ್ರಮೆಂಟೇಶನ್ ವಿಭಾಗದಿಂದ 2 ಪ್ರಾಜೆಕ್ಟ್‌ಗಳು ಉತ್ತಮ ಎಂದು ಪರಿಗಣಿಸಿ ಹಣಕಾಸಿನ ಪ್ರಾಯೋಜಕತ್ವ ಪಡೆದಿವೆ.
ಇದೊಂದು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಯಾಗಿದ್ದು, ಬಿಐಇಟಿ ಹೆಮ್ಮೆಯ ಕಿರೀಟಕ್ಕೆ ಗರಿ ಮೂಡಿಸಿದೆ.
ಜಗತ್ತಿನಾದ್ಯಂತ ಕೋವಿಡ್-19 ತಂದಿಟ್ಟ ಈ ಕಠಿಣ ಪರಿಸ್ಥಿತಿಯಲ್ಲಿ ಬಿಐಇಟಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಾಧನೆಗೆ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ್, ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್, ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಅಭಿನಂದಿಸಿದ್ದಾರೆ.