ಆತ್ಮ ನಿರ್ಭರವಲ್ಲ, ಆತ್ಮ ಬರ್ಬರ; ಆಯ-ವ್ಯಯವಲ್ಲ, ತೆರಿಗೆ ಏರಿಕೆ ಬಜೆಟ್

ಜಿಲ್ಲಾ ಕಾಂಗ್ರೆಸ್ ಟೀಕೆ

ದಾವಣಗೆರೆ, ಫೆ.1- ಕೇಂದ್ರ ಸರ್ಕಾರದ 2021ನೇ ಸಾಲಿನ ಕೇಂದ್ರ ಬಜೆಟ್ ಅಲ್ಲ, ತೆರಿಗೆ ಹೆಚ್ಚಳಕ್ಕೆ ಸೀಮಿತವಾಗಿ ಜನರ ಯಾವುದೇ ನಿರೀಕ್ಷೆ ಇಲ್ಲದ ಆತ್ಮಬರ್ಬರ ಬಜೆಟ್ ಎಂದು ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರುಗಳು, ಕೇಂದ್ರ ಸರ್ಕಾರ ದಿವಾಳಿ ಬಜೆಟ್ ಮಂಡಿಸಿದೆ. ಕೋವಿಡ್ ವೇಳೆ ಹಲವು ಕೈಗಾರಿಕೆಗಳು ಮುಚ್ಚಿಹೋಗಿದ್ದವು. ಈ ಕೈಗಾರಿಕೆಗಳನ್ನು ಪುನಾರಂಭಿಸಲು ಒತ್ತು ನೀಡದೇ ಯಂತ್ರೋಪಕರಣಗಳ ಮೇಲೆ ಕೃಷಿ ಸೆಸ್ ಹಾಕಲಾಗಿದೆ. ರೈತರ ಅಭಿವೃದ್ದಿಗೆ ಹೊಸ ಯೋಜನೆ ಪ್ರಕಟಿಸಿಲ್ಲ ಎಂದು ಟೀಕಿಸಿದ್ದಾರೆ.

ದೇಶದ ಇತಿಹಾಸದಲ್ಲಿ ಇಂತಹ ನಿರುತ್ಸಾ ಹದ ಬಜೆಟ್ ನೋಡಿಲ್ಲ. ಯಾವ ವರ್ಗಕ್ಕೂ ಸಹಾಯ ಮಾಡಿಲ್ಲ. ಕೊರೊನಾ ಲಸಿಕೆಗೆ 36 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ. ಮೊದಲು ಪ್ರಧಾನಿ, ಸಂಸದರು ವ್ಯಾಕ್ಸಿನ್ ಪಡೆಯಬೇಕಿತ್ತು. ಆದರೆ ಅವರು ವ್ಯಾಕ್ಸಿನ್ ಪಡೆಯದೆ ಕೆಳಹಂತದವರನ್ನು ಅದಕ್ಕೆ ನೂಕಿದ್ದಾರೆ. ಜನರ ವಿರುದ್ಧವಾದ ಬಜೆಟ್ ಇದಾಗಿದೆ. ಯುವಕರಿಗೆ ಉದ್ಯೋಗದ ಬಗ್ಗೆ ಏನೂ ಯೋಜನೆ ಇಲ್ಲ. ರೈತರ ರಕ್ಷಣೆಯ ಬಗ್ಗೆಯೂ ಏನೂ ಇಲ್ಲ, ಬೆಲೆ ನಿಯಂತ್ರಣ, ರಕ್ಷಣೆ ಬಗ್ಗೆ ತಿಳಿಸಿಲ್ಲ. ಸಣ್ಣಪುಟ್ಟ ರಸ್ತೆ ಬಗ್ಗೆ ಹೇಳಿದ್ದಾರಷ್ಟೆ. ರೈಲುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಪಬ್ಲಿಕ್ ಸೆಕ್ಟರ್ ಸಂಸ್ಥೆ ಮಾರಾಟಕ್ಕಿಟ್ಟಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ ಎಂದು ಅವರು ಟೀಕಿಸಿದರು.

ಹೆಚ್ಚು ತೆರಿಗೆಯನ್ನು ಕೇಂದ್ರ ಸಂಗ್ರಹ ಮಾಡುತ್ತಿದೆ. ಕೇಂದ್ರ ಘೋಷಿಸಿದ 20 ಲಕ್ಷ ಕೋಟಿ ಯಾರಾರಿಗೆ ಸಿಕ್ಕಿದೆಯೋ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಸಾಮಾನ್ಯ ಜನರ ಮೇಲೆ ದೊಡ್ಡ ಭಾರ ಹಾಕಿದ್ದಾರೆ. ಈ ಬಜೆಟ್‍ನಿಂದ ಯಾವ ಉತ್ಸಾಹವೂ ಇಲ್ಲ. ನಿರುದ್ಯೋಗ, ಕಳ್ಳ-ಕಾಕರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ  ಕೇಂದ್ರ ಬಜೆಟ್ ಸಂಪೂರ್ಣ ನಿರಾಶಾದಾಯಕ ಬಜೆಟ್. ಯಾರ ಸಲಹೆಗಳನ್ನೂ ಪಡೆಯದ ವಿತ್ತಸಚಿವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಯಾ ರಿಂದಲೂ ಸಲಹೆ ಪಡೆಯಲಿಲ್ಲ. ಇವತ್ತು ಕೇಂದ್ರ ಬಜೆಟ್ ಮಂಡನೆಯಾಗಿದೆ. ಆದರೆ ರಾಜ್ಯಕ್ಕೆ ಅವರ ಕೊಡುಗೆ ಏನೇನೂ ಇಲ್ಲ ಎಂದಿದ್ದಾರೆ.

ಮೆಟ್ರೋಗೆ 14 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಸಂಪೂರ್ಣ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಕೇಂದ್ರ ಸರ್ಕಾರದ ಬಜೆಟ್ಟನ್ನು ಸಂಪೂರ್ಣವಾಗಿ ಟೀಕಿಸಿದ್ದಾರೆ.

 

error: Content is protected !!