ರೆಸಾರ್ಟ್‍ಗಳತ್ತ ಸದಸ್ಯರು, ಮಹಿಳೆಯರ ದರ್ಬಾರ್ ಶುರು

ಹರಪನಹಳ್ಳಿ ತಾಲ್ಲೂಕು ಗ್ರಾಮ ಪಂಚಾಯ್ತಿ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ

ಹರಪನಹಳ್ಳಿ, ಜ.31- ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಈಗಾಗಲೇ ಪ್ರಕಟವಾಗಿದ್ದು 37 ಗ್ರಾಮ ಪಂಚಾಯಿತಿಗಳಲ್ಲಿ ತಾಲ್ಲೂಕಿನ ಕಂಚಿಕೇರಿ, ಹಾರಕನಾಳು ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಪೂರ್ಣಗೊಂಡಿಲ್ಲ. 

ಉಳಿದ 35 ಗ್ರಾಮ ಪಂಚಾಯಿತಿಗಳ  ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಫೆ.4 ರಿಂದ 9 ರವರೆಗೆ ನಿಗದಿಯಾಗುತ್ತಿದ್ದಂತೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರಾಗಲು ಸದಸ್ಯರು ರೆಸಾರ್ಟ್‍ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಆಯ್ಕೆಯಾಗುವ ದಿನಗಳ ಕ್ಷಣಗಣನೆ ಶುರುವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಮಸ್ಥರು ಯಾರು ಪಟ್ಟಕ್ಕೇರುತ್ತಾರೆ ಎನ್ನುವ ಕುತೂಹಲದಿಂದ ಜಾತಕ ಪಕ್ಷಿಯಂತೆ  ಕಾಯುತ್ತಿದ್ದಾರೆ.

ಕುಟುಂಬ ಹಸ್ತಕ್ಷೇಪಕ್ಕೆ ಬೀಳುತ್ತಾ ಬ್ರೇಕ್! ಈಗಾಗಲೇ ಗ್ರಾಪಂ ಚುನಾವಣೆಗ ಳಲ್ಲಿ ಸದಸ್ಯರಾಗಿ ಯುವಕರು, ಮಹಿಳೆಯರು ಹೆಚ್ಚು ಆಯ್ಕೆಯಾಗಿರುವುದರಿಂದ ಅದರಲ್ಲೂ ಕೆಲವು ವಿದ್ಯಾವಂತರಿದ್ದರೆ, ಇನ್ನು ಕೆಲವರು ಅವಿದ್ಯಾವಂತರು ಇದ್ದು, ಇವರಿಗಿಂತ ಕುಟುಂಬದವರ ಹಸ್ತಕ್ಷೇಪ ನಡೆಯಬಹುದಾ ಎನ್ನುವ ಮಾತುಗಳು ಕೇಳಿಬಂದಿದ್ದು, ಪಂಚಾಯತ್ ರಾಜ್ ಅಧಿಕಾರಿಗಳು ಸದಸ್ಯರಿಗೆ ಗ್ರಾಪಂ ಆಡಳಿತ ನಡೆಸಲು ಸರಿಯಾದ ತರಬೇತಿ ಕೊಟ್ಟು ಕುಟುಂಬ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕುತ್ತಾರೋ, ಇಲ್ಲವೋ ಗೊತ್ತಾಗಬೇಕಿದೆ.

19 ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರದ್ದೇ ದರ್ಬಾರ್: ತಾಲ್ಲೂಕಿನಲ್ಲಿ ಈಗಾಗಲೇ 37 ಗ್ರಾಮ ಪಂಚಾಯಿತಿಗಳಲ್ಲಿ ಮೀಸಲಾತಿ ಘೋಷಣೆಯಾಗಿದ್ದು, ಇದರಲ್ಲಿ ಗ್ರಾಮ ಸ್ವರಾಜ್ ಕಲ್ಪನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ನೀಡಿರುವ ಕಾರಣದಿಂದ ನಂದಿಬೇವೂರು, ಮಾಡಲಗೇರಿ, ಚಿಗಟೇರಿ, ಬೆಣ್ಣಿಹಳ್ಳಿ, ಚಿರಸ್ಥಹಳ್ಳಿ, ಹಿರೇಮೇಗಳಗೇರಿ, ಉಚ್ಚಂಗಿದುರ್ಗ, ಪುಣಭಗಟ್ಟ, ಶಿಂಗ್ರಿಹಳ್ಳಿ ಗ್ರಾಪಂಗಳಲ್ಲಿ ಸಾಮಾನ್ಯ ವರ್ಗದ ಮಹಿಳೆಯರು ಅಧ್ಯಕ್ಷರಾಗುವ ಸಂಭವವಿದೆ. ಹಾರಕನಾಳು, ಮತ್ತಿಹಳ್ಳಿ, ಕಡಬಗೇರಿ, ಕುಂಚೂರು, ನಿಟ್ಟೂರು, ಹೊಸಕೋಟೆ ಗ್ರಾಪಂಗಳಲ್ಲಿ ಪರಿಶಿಷ್ಟ ಜಾತಿ (ಎಸ್‍ಸಿ) ಮಹಿಳೆಯರು ಅಧ್ಯಕ್ಷರಾಗುವರು. ಇನ್ನೂ ಲಕ್ಷ್ಮೀಪುರ, ಅರಸಿಕೇರಿ, ಯಡಿಹಳ್ಳಿ, ಕಂಚಿಕೇರಿ ಗ್ರಾಮ ಪಂಚಾಯ್ತಿಗಳಲ್ಲಿ ಪರಿಶಿಷ್ಟ ಪಂಗಡ (ಎಸ್‍ಟಿ) ಮಹಿಳೆಯರು ಅಧ್ಯಕ್ಷರಾಗುವರು. ಸಾಸ್ವಿಹಳ್ಳಿ, ಅಡವಿಹಳ್ಳಿ, ನೀಲಗುಂದ, ತೌಡೂರು, ಕಡಬಗೇರಿ, ಹಾರಕನಾಳು, ಕೆ.ಕಲ್ಲಹಳ್ಳಿ, ತೆಲಿಗಿ, ಕಡತಿ ಗ್ರಾಪಂಗಳಲ್ಲಿ ಸಾಮಾನ್ಯ ವರ್ಗದ ಮಹಿಳೆಯರು, ಬಾಗಳಿ,  ಮೈದೂರು, ಕೂಲಹಳ್ಳಿ, ತೊಗರಿಕಟ್ಟೆ, ಹಲುವಾಗಲು, ರಾಗಿಮಸಲವಾಡ ಪಂಚಾಯ್ತಿಗಳಲ್ಲಿ ಪರಿಶಿಷ್ಟ ಜಾತಿ ಮಹಿಳೆಯರು, ದುಗ್ಗಾವತ್ತಿ, ಚಟ್ನಿಹಳ್ಳಿ, ನಂದಿಬೇವೂರು, ಉಚ್ಚಂಗಿದುರ್ಗ ಪಂಚಾಯ್ತಿಗಳಲ್ಲಿ ಪರಿಶಿಷ್ಟ ಪಂಗಡ ಮಹಿಳೆಯರು ಸೇರಿ ಒಟ್ಟು 19 ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು ಉಪಾಧ್ಯಕ್ಷರಾಗುವರು. ಇನ್ನು ನಾಲ್ಕು ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳಲ್ಲಿ ಮಹಿಳೆಯರೇ ಆಡಳಿತ ನಡೆಸುವರು. ಇದೀಗ ಮಹಿಳೆಯರು ಅಧ್ಯಕ್ಷರಾಗಿ ಅಥವಾ ಉಪಾಧ್ಯಕ್ಷರಾಗಿ 19 ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ. ಇದರಿಂದ ಮಹಿಳೆಯರ ದರ್ಬಾರ್ ಶುರುವಾಗಲಿದೆ.


ಕೆ. ಉಚ್ಚೆಂಗೆಪ್ಪ,
[email protected]

error: Content is protected !!