ಎತ್ತಿನ ಗಾಡಿ, ಬೈಕ್, ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸಿದರೆ ಅಕ್ರಮ ಅಲ್ಲ

ಎತ್ತಿನ ಗಾಡಿ, ಬೈಕ್, ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸಿದರೆ ಅಕ್ರಮ ಅಲ್ಲ - Janathavaniದಾವಣಗೆರೆ, ಜ.30- ಎತ್ತಿನ ಗಾಡಿ, ಬೈಕ್ ಹಾಗೂ ಟ್ರ್ಯಾಕ್ಟರ್ ನಲ್ಲಿ ಮರಳು ಸಾಗಾಣಿಕೆ ಮಾಡಿದರೆ ಅದು ಅಕ್ರಮ ಅಲ್ಲ. ದೊಡ್ಡ ಟ್ರಕ್ ಹಾಗೂ 10 ಚಕ್ರವುಳ್ಳ ವಾಹನಗಳಲ್ಲಿ ಬೆಂಗಳೂರಿಗೆ ಸಾಗಾಟ ಮಾಡಿದರೆ ಅದು ಅಕ್ರಮ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಇಂದಿಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರದ ತುಂಗಭದ್ರಾ ನದಿಯಲ್ಲಿ ಎತ್ತಿನಗಾಡಿ, ಬೈಕ್, ಟ್ರ್ಯಾಕ್ಟರ್ ನಲ್ಲಿ ಮರಳು ತೆಗೆದುಕೊಂಡು ಹೋದರೆ ಅಕ್ರಮ ಮರಳುಗಾರಿಕೆ ಅಲ್ಲ. ಬಡವರು, ರೈತರು, ನಿರುದ್ಯೋಗಿ ಯುವಕರು ಎತ್ತಿನ ಗಾಡಿ, ಟ್ರ್ಯಾಕ್ಟರ್ ಗಳಲ್ಲಿ ಮರಳು ತೆಗೆದು ಮನೆ ಕಟ್ಟಲು ನೀಡಿದರೆ ಅದು ಅಪರಾಧ ಆಗಬಾರದು‌. ಅದನ್ನು ಸಕ್ರಮಗೊಳಿಸಲಿ. ರಾಜ್ಯ ಸರ್ಕಾರ ಮರಳು ನೀತಿ ಬದಲಾವಣೆ ಮಾಡಲಿ. ಈ ವಿಚಾರವಾಗಿ ಸಚಿವ ಮುರುಗೇಶ್ ನಿರಾಣಿ ಅವರ ಜೊತೆ ಮಾತಾಡಿರುವೆ ಎಂದು ಸ್ಪಷ್ಟಪಡಿಸಿದರು.

ನನಗೆ ಸುಮ್ಮನಿರಲು ಸಿಎಂ ಅವರು ನೂರಾರು ಕೋಟಿ ರೂ. ಅನುದಾನ ನೀಡಿಲ್ಲ. ಅನುದಾನ ಪಡೆಯುವುದು ನನ್ನ ಹಕ್ಕು. ಈಗಾಗಲೇ ಮೂರು ಸಾವಿರ ಕೋಟಿ ಅನುದಾನ ಹಾಗೂ ಈಗ ಎರಡು ಸಾವಿರ ಕೋಟಿ ರೂ. ಅನುದಾನ ಹೊನ್ನಾಳಿ ಕ್ಷೇತ್ರಕ್ಕೆ ನೀಡಿದ್ದಾರೆಂದರು. 

ಸಚಿವ ಸ್ಥಾನಕ್ಕಾಗಿ ಹೋರಾಟ ಮಾಡಲ್ಲ. ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ನಾನು. ಯತ್ನಾಳ್ ಅವರು ಸಿಎಂ ಆಗುವ ಬಗ್ಗೆ ಹೇಳಿದ್ದು ಸರಿಯಲ್ಲ. ಸಿಎಂ ಆಗುವುದಾದರೆ ಬರುವ  ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ. ಪಕ್ಷದ ವರಿಷ್ಠರ ಹೇಳಿದರೆ ಸಿಎಂ ಆಗಲಿ ಎಂದು ಸವಾಲು ಹಾಕಿದರು.

ಯಡಿಯೂರಪ್ಪ  ಅವರು ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಪಕ್ಷದ ವರಿಷ್ಠರೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಕೆಲವರು ಸಿಎಂ ಸ್ಥಾನದ ಬಗ್ಗೆ ಮಾತಾಡುತ್ತಾರೆ. ಅದು ಅವರ ಘನತೆಗೆ ತಕ್ಕುದಲ್ಲ ಎಂದು ಪರೋಕ್ಷವಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೆ ರೇಣುಕಾಚಾರ್ಯ ಟಾಂಗ್ ಕೊಟ್ಟರು.

ಮೇಲ್ಮನೆಯಲ್ಲಿ ಕಾಂಗ್ರೆಸ್ ಎಂಎಲ್ ಸಿ ಆಶ್ಲೀಲ  ಚಿತ್ರ ವೀಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮೇಲ್ಮನೆಯನ್ನು ಚಿಂತಕರ ಛಾವಡಿ, ಬುದ್ದಿವಂತರ ಮನೆ ಎಂದು ಹೇಳುತ್ತಾರೆ. ಅಂತಹ ಸ್ಥಳದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ನೋಡಬಾರದ್ದನ್ನು ನೋಡಿದ್ದಾರೆ. ಅಶ್ಲೀಲ ಚಿತ್ರವನ್ನು ನೋಡಿರುವುದನ್ನು ನಾನು ಖಂಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು. 

ನಮ್ಮ ಪಕ್ಷದ ಶಾಸಕರಿಗೆ ಯಾರೋ‌ ಕಳಿಸಿದ್ದು, ಬಂದಿದ್ದು‌ ನೋಡಿದ್ದರು. ಅದನ್ನು ಕಾಂಗ್ರೆಸ್ ನವರು ಅಶ್ಲೀಲ ಚಿತ್ರ ನೋಡಿದ್ದರು ಎಂದಿದ್ದರು. ಈಗ ನಿಮ್ಮ ಪಕ್ಷದ ಹಿರಿಯ ನಾಯಕರೇ ನೋಡಿದ್ದಾರೆ. ಅದಕ್ಕೆ ಏನು ಅಂತೀರಾ ? ಎಂದು ಸಿದ್ದರಾಮಯ್ಯ, ಡಿಕೆಶಿ ಅವರೇ ಉತ್ತರಿಸಿ. 

ನಮ್ಮ ಪಕ್ಷದ ಸಚಿವರು ತಪ್ಪು ಮಾಡದಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.

error: Content is protected !!