ಏಪ್ರಿಲ್ ಮಧ್ಯಾವಧಿಯಲ್ಲಿ ಕೊರೊನಾ ಗರಿಷ್ಠ ಹಂತಕ್ಕೆ

ನವದೆಹಲಿ, ಏ. 2 – ಏಪ್ರಿಲ್ ಮಧ್ಯಾವಧಿಯಲ್ಲಿ ಕೊರೊನಾ ಎರಡನೇ ಅಲೆ ಉತ್ತುಂಗಕ್ಕೆ ತಲುಪಲಿದೆ ಎಂದು ಹಲವಾರು ವಿಜ್ಞಾನಿಗಳು ಗಣಿತದ ಮಾದರಿಗಳನ್ನು ಬಳಸಿ ಅಂದಾಜಿಸಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಸೋಂಕುಗಳಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದವರು ಹೇಳಿದ್ದಾರೆ.

ಶುಕ್ರವಾರ ದೇಶದಲ್ಲಿ 81,466 ಸೋಂಕಿತರು ಪತ್ತೆಯಾಗಿದ್ದರು. ಇದು ಕಳೆದ ಆರು ತಿಂಗಳಲ್ಲೇ ಅತಿ ಹೆಚ್ಚಿನದಾಗಿದೆ. ಇದೇ ದಿನ 469 ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಮೊದಲ ಕೊರೊನಾ ಅಲೆ ಆಗಸ್ಟ್ ತಿಂಗಳಲ್ಲಿ ಏರಿಕೆಯಾಗಿ ಸೆಪ್ಟೆಂಬರ್‌ನಲ್ಲಿ ಉತ್ತುಂಗಕ್ಕೆ ತಲುಪಿತ್ತು. ನಂತರ ಫೆಬ್ರವರಿಯಲ್ಲಿ ಇಳಿಮುಖವಾಗಿತ್ತು. ಈ ಏರಿಳಿತವನ್ನು §ಸೂತ್ರ¬ ಎಂಬ ಗಣಿತ ಮಾದರಿ ಅಂದಾಜಿಸಿತ್ತು.

ಕಾನ್‌ಪುರದ ಐ.ಐ.ಟಿ.ಯ ಮನೀಂದ್ರ ಅಗರ್‌ವಾಲ್ ಸೇರಿದಂತೆ ಹಲವು ವಿಜ್ಞಾನಿಗಳು ಇದೇ ಸೂತ್ರ ಬಳಸಿ ಎರಡನೇ ಅಲೆ ಉತ್ತುಂಗಕ್ಕೆ ತಲುಪುವ ಅವಧಿಯನ್ನು ಅಂದಾಜಿಸಿದ್ದಾರೆ. ಅದರಂತೆ ಈಗಿರುವ ಅಲೆ ಏಪ್ರಿಲ್ ಮಧ್ಯಾವಧಿಗೆ ಉತ್ತುಂಗಕ್ಕೆ ತಲುಪಲಿದೆ.

ಏಪ್ರಿಲ್ 15ರಿಂದ 20ರ ನಡುವೆ ಕೊರೊನಾ ಸೋಂಕು ಗರಿಷ್ಠ ಹಂತ ತಲುಪಲಿದೆ. ಈ ಬಾರಿಯ ಅಲೆ ಎಷ್ಟು ವೇಗವಾಗಿ ಏರುತ್ತಿದೆಯೋ ಅಷ್ಟೇ ವೇಗವಾಗಿ ಇಳಿಯಲಿದೆ. ಮೇ ಅಂತ್ಯದವರೆಗೆ ಸೋಂಕುಗಳಲ್ಲಿ ನಾಟಕೀಯ ಇಳಿತವಾಗಲಿದೆ ಎಂದು ಅಗರ್‌ವಾಲ್ ತಿಳಿಸಿದ್ದಾರೆ.

ಸೋಂಕಿನ ತೀವ್ರ ಏರಿಕೆಯಿಂದಾಗಿ ಕೊರೊನಾ ಗರಿಷ್ಠ ಮಟ್ಟಕ್ಕೆ ತಲುಪುವುದನ್ನು ಅಂದಾಜಿಸುವುದು ಕಠಿಣವಾಗಿದೆ. ಪ್ರಸಕ್ತ ಸೋಂಕು ದಿನಕ್ಕೆ ಲಕ್ಷದ ಹತ್ತಿರಕ್ಕೆ  ಬರುತ್ತಿದೆ. ಪ್ರಕರಣಗಳು ಇನ್ನು ಮುಂದೆ ಹೆಚ್ಚು – ಕಡಿಮೆಯಾದರೂ ಸಹ ಏಪ್ರಿಲ್ 20ರ ನಂತರ ಇಳಿಮುಖವಾಗಲಿವೆ ಎಂದವರು ಹೇಳಿದ್ದಾರೆ.

error: Content is protected !!