ದಾವಣಗೆರೆ, ಮಾ.31- ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಸಮಾಜದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವು ಏ.2 ರಂದು ನಡೆಯಲಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆಂಗೋ ಹನುಮಂತಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಧ್ಯಾಹ್ನ 1.30ಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ, ನಂತರ ತ್ರಿಶೂಲ್ ಕಲಾಭವನದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೇರಿದಂತೆ ಜಿಲ್ಲೆಯ ಸಂಸದರು, ಶಾಸಕರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುರುಬ ಸಮಾಜದ 256 ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ದಿಳ್ಳೆಪ್ಪ, ಹೆಚ್.ಎಂ. ಮಂಜುನಾಥ್, ಬಳ್ಳಾರಿ ಷಣ್ಮುಖಪ್ಪ, ಬಿ.ಹೆಚ್. ಪರಶುರಾಮಪ್ಪ, ಬಳ್ಳಾರಿ ಜಯಣ್ಣ, ಹೆಚ್.ಬಿ. ಗೋಣೆಪ್ಪ, ನಂದೆಪ್ಪ, ಪ್ರಕಾಶ್ ಮತ್ತು ಇತರರು ಉಪಸ್ಥಿತರಿದ್ದರು.