ಹೊನ್ನಾಳಿ, ಮಾ.31- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸುಮಾರು 8.5 ಅಡಿ ಎತ್ತರದ 9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಂದರ ಕಂಚಿನ ಪ್ರತಿಮೆಯನ್ನು ತಾಲ್ಲೂಕಿನ ಯಕ್ಕನಹಳ್ಳಿಯಲ್ಲಿ ಏ.2 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಹೇಳಿದರು.
ಅವರು ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ 2ರ ಶುಕ್ರವಾರ ಸಿದ್ದರಾಮಯ್ಯ ಅವರು ಹೆಲಿಕ್ಯಾಪ್ಟರ್ ಮೂಲಕ ಹೊನ್ನಾಳಿಗೆ ಆಗಮಿಸಿ, ಇಲ್ಲಿಂದ ಯಕ್ಕನಹಳ್ಳಿಗೆ ರಸ್ತೆ ಮೂಲಕ ಪ್ರಯಾಣಿಸಿ ಯಕ್ಕನಹಳ್ಳಿಯ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಬೆಳಗ್ಗೆ 11.30 ಕ್ಕೆ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದು, ನಂತರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಶ್ರೀ ಬೀರಲಿಂಗೇಶ್ವರ ಟ್ರಸ್ಟ್ ಕಮಿಟಿ ಯಕ್ಕನಹಳ್ಳಿಯ ಅಧ್ಯಕ್ಷ ಬಿ. ಕರಿಬಸಪ್ಪ ವಹಿಸಲಿದ್ದಾರೆ ಎಂದರು.
ಸಾನ್ನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠ ಮೈಸೂರು ವಿಭಾಗದ ಶ್ರೀ ಶಿವಾನಂದ ಪುರಿ ಸ್ವಾಮೀಜಿ, ಹದಡಿ ಚಂದ್ರಗಿರಿ ಮಠದ ಸದ್ಗುರು ಮುರಳೀಧರ ಸ್ವಾಮೀಜಿ, ಸಿದ್ದಾರೂಢ ಮಠ ಯಕ್ಕನಹಳ್ಳಿ ಇದರ ಅಧ್ಯಕ್ಷ ಬಿ. ಬಸವರಾಜಪ್ಪ ಭಾಗವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕ ಶಾಮನೂರು ಶಿವಶಂಕರಪ್ಪ, ಶಾಸಕ ಭೈರತಿ ಸುರೇಶ್, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ, ಬಿ.ಜಿ.ಗೋವಿಂದಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಜಬ್ಬಾರ್ ಸಾಬ್, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಕುರುಬರ ಸಂಘದ ಪದಾಧಿಕಾರಿಗಳು, ಯಕ್ಕನಹಳ್ಳಿ ಗ್ರಾಮದ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯಕ್ಕನಹಳ್ಳಿಯ ಬಿ. ಕರಿಬಸಪ್ಪ ಕುರುಬ ಸಮಾಜದ ತಾಲ್ಲೂಕು ಕಾರ್ಯಾಧ್ಯಕ್ಷ ಬಿ. ಸಿದ್ದಪ್ಪ, ರಾಜ್ಯ ಕುರುಬ ಸಂಘದ ನಿರ್ದೇಶಕ ದ್ಯಾಮಪ್ಪ, ಮುಖಂಡರಾದ ಹೆಚ್.ಎ. ಉಮಾಪತಿ, ಮರುಳಸಿದ್ದಪ್ಪ, ಯಕ್ಕನಹಳ್ಳಿ ಗ್ರಾ.ಪಂ. ಅಧ್ಯಕ್ಷ ವೈ.ಕೆ. ದಯಾನಂದ್, ಮಾಜಿ ಅಧ್ಯಕ್ಷ ಕೆ.ವಿ. ಚಿಕ್ಕಪ್ಪ, ಮುಖಂಡರಾದ ವಿಜೇಂದ್ರಪ್ಪ, ಲಕ್ಷ್ಮಪ್ಪ, ರೇವಣಸಿದ್ದಪ್ಪ, ಹನುಮಂತಪ್ಪ, ವೆಂಕಟೇಶ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.