ಸಿದ್ದರಾಮಯ್ಯ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಟಾಂಗ್
ದಾವಣಗೆರೆ, ಮಾ.31- ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿರುವುದಾಗಿ ರಾಜಕಾರಣಕ್ಕಾಗಿ ಟೀಕೆ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತೆರೆದ ಮನಸ್ಸಿನಿಂದ ಬಜೆಟ್ ಒಪ್ಪಿಕೊಳ್ಳಲಿ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ತಿಳಿಸಿದರು.
ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕೊರೊನಾ ವೈರಸ್ನಿಂದಾದ ಲಾಕ್ ಡೌನ್ ಸೇರಿದಂತೆ ಆರ್ಥಿಕ ಸಂಕಷ್ಟ, ಸವಾಲುಗಳ ಮಧ್ಯೆಯೂ ಆದಾಯವೇ ಇಲ್ಲದಿದ್ದರೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು, ಜನರಿಗೂ ಹೊರೆಯಾ ಗದಂತೆ, ಸರ್ಕಾರಕ್ಕೂ ಭಾರವಾಗದಂತಹ ಬಜೆಟ್ಟನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ್ದಾರೆ.
ನಾಡಿನ ಆರ್ಥಿಕ ತಜ್ಞರು, ವಿಮರ್ಶಕರು ಯಡಿಯೂರಪ್ಪ ಅವರ ಬಜೆಟ್ ಮಂಡನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿರುವ ಹಿರಿಯರಾದ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ವ್ಯವಸ್ಥೆ ದಿವಾಳಿಯಾಗಿದೆಯೆಂದು ರಾಜಕಾರಣಕ್ಕಾಗಿ ಟೀಕಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಿ.ಡಿ. ಪ್ರಕರಣದಿಂದ ಬಿಜೆಪಿಗೆ ಹಾನಿಯಿಲ್ಲ: ಸಿ.ಡಿ. ಪ್ರಕರಣವನ್ನು ನಾಡಿನ ಜನರು ಸೂಕ್ಷ್ಮವಾಗಿ ಗಮನಿಸು ತ್ತಿದ್ದಾರೆ. ಈ ವಿಚಾರಕ್ಕೆ ವಿಧಾನಸಭೆಯಲ್ಲಿ ಒಂದು ದಿನ ಪೂರ್ತಿ ಚರ್ಚೆಯಾಗಿದೆ. ರಾಜಕಾರಣದಲ್ಲಿ ಷಡ್ಯಂತ್ರಗಳು ನಡೆಯುತ್ತಿರುವುದು ಗಮನಾರ್ಹ. ಸಿ.ಡಿ. ಪ್ರಕರಣದಿಂದ ಉಪ ಚುನಾವಣೆಯ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ಬಿಜೆಪಿಗೆ ಇದರಿಂದ ಹಾನಿ ಆಗುವುದಿಲ್ಲ ಎಂದರು.
ಅನಾವಶ್ಯಕವಾಗಿ ತೇಜೋವಧೆ ಆಗಬಾರದೆಂಬ ಕಾರಣಕ್ಕೆ ಕೆಲವರು ಕಾನೂನು ಮೊರೆ ಹೋಗಿದ್ದಾರೆ.
ಕಾನೂನು ಚೌಕಟ್ಟಿನಲ್ಲಿ ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದೇನೂ ತಪ್ಪಲ್ಲ. ಯಾವ ಉದ್ದೇಶಕ್ಕಾಗಿ ತಾವು ತಡೆಯಾಜೆ ತಂದಿದ್ದೇವೆಂಬುದಾಗಿಯೂ ನ್ಯಾಯಾಲಯದ ಮೊರೆ ಹೋದವರು ಈಗಾಗಲೇ ಹೇಳಿದ್ದಾರೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹಿಂದೆಲ್ಲಾ ಚುನಾವಣೆ ಬಂದಾಗ ಮಾತ್ರ ಪಕ್ಷಗಳು, ನಾಯಕರಲ್ಲಿ ಪರ-ವಿರೋಧ ಕಾಣುತ್ತಿತ್ತು. ಆಡಳಿತ-ವಿಪಕ್ಷ ತಮ್ಮ ಜವಾಬ್ಧಾರಿ ಅರಿತು, ಅಭಿವೃದ್ಧಿ ಕೆಲಸ ಮಾಡುತ್ತಿದ್ದವು. ಆದರೆ, ಇಂತಹ ದ್ವೇಷದ ರಾಜಕಾರಣ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ವೈಯಕ್ತಿಕ ವಿಚಾರಗಳಲ್ಲೂ ಕೈ ಹಾಕುತ್ತಿರುವುದು ಒಳ್ಳೆಯದೂ ಅಲ್ಲ. ರಾಜ್ಯದ ಜನತೆ ಇಂತಹದ್ದಕ್ಕೆಲ್ಲಾ ಸೂಕ್ತ ಉತ್ತರವನ್ನೇ ನೀಡಲಿದ್ದಾರೆಂದರು.