ರೇಣುಕಾಚಾರ್ಯಗೆ ಡಿಸಿಎಂ ಸವದಿ ಕಿವಿಮಾತು
ದಾವಣಗೆರೆ, ಜ. 18 – ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಒಳ್ಳೆಯ ಭವಿಷ್ಯ ಇದೆ. ಅವರು ತಮ್ಮ ಮಾತುಗಳನ್ನು ಸಾರ್ವಜನಿಕ ವೇದಿಕೆಯ ಬದಲು, ಪಕ್ಷದಲ್ಲಿ ಹೇಳಲಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿವಿಮಾತು ಹೇಳಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಹಿರಿಯ ಸಚಿವರು ರಾಜೀನಾಮೆ ನೀಡಿ, ಹೊಸಬರಿಗೆ ಅವಕಾಶ ಕಲ್ಪಿಸಬೇಕೆಂದು ರೇಣುಕಾಚಾರ್ಯ ಹೇಳಿದ ಬಗ್ಗೆ ಕೇಳಿದಾಗ ಈ ಪ್ರತಿಕ್ರಿಯೆ ನೀಡಿದ್ದಾರೆ.
ರೇಣುಕಾಚಾರ್ಯ ಹೇಳಿಕೆ ವೈಯಕ್ತಿಕ ಅಭಿ ಪ್ರಾಯ. ಸಚಿವರಾಗಬೇಕು ಎಂಬ ಬಯಕೆ ತಪ್ಪಲ್ಲ. ಪಕ್ಷದ ವೇದಿಕೆಯಲ್ಲಿ ಈ ಮಾತುಗಳನ್ನು ಹೇಳಬೇಕು. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಿನ್ನೆ ಕಿವಿಮಾತು ಹೇಳಿದ್ದಾರೆ ಎಂದು ಹೇಳಿದರು.
ನಾವೆಲ್ಲ ಸ್ನೇಹಿತರು. ರೇಣುಕಾಚಾರ್ಯ ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದೂ ಸವದಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದ ಕಾರಣ ಸಚಿವ ಸ್ಥಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮಾಧಾನವಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಒಪ್ಪಿಕೊಂಡ ಸಚಿವರು, ಮುಂದಿನ ದಿನಗಳಲ್ಲಿ ಪ್ರದೇಶವಾರು ಸಚಿವ ಸ್ಥಾನದ ಚಿಂತನೆ ನಡೆಯಲಿದೆ ಎಂದಿದ್ದಾರೆ.
ಮರಾಠಿ ಭಾಷಿಗರ ಪ್ರದೇಶಗಳನ್ನು ಮಹಾ ರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಮಹಾ ರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯಾದವರು ಏನಾದರೂ ಹೇಳುವಾಗ ಎಚ್ಚರಿಕೆ ಇರಬೇಕು. ಸಾವಿರ ಜನ ಮುಖ್ಯಮಂತ್ರಿಗಳು ಬಂದರೂ ಬೆಳಗಾವಿ ಕರ್ನಾಟಕದಲ್ಲೇ ಇರುತ್ತದೆ ಎಂದರು.