ದಾವಣಗೆರೆ, ಜ.16- ಧಾರವಾಡ ಸಮೀಪದ ಇಟಿಗಟ್ಟಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಗರದ 11 ಮಹಿಳೆಯರು ಮೃತಪಟ್ಟ ಘಟನೆ ಅತ್ಯಂತ ನೋವಿನ ಸಂಗತಿ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಶೈಲಿಯಲ್ಲಿ ಸೇವೆ ಸಲ್ಲಿಸುತ್ತಾ ಗುರುತಿಸಿಕೊಂಡಿದ್ದ ಮಹಿಳೆಯರು ಅಕಾಲಿಕವಾಗಿ ಮೃತಪಟ್ಟಿದ್ದು ಮನಸ್ಸಿಗೆ ಆಘಾತವನ್ನುಂಟು ಮಾಡಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ವಿಷಾದ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟವರು ಸಮಾಜದ ಬೆಳಕಾಗಿ ಬೆಳಗಬೇಕಾಗಿದ್ದವರು. ಮೃತಪಟ್ಟವರಲ್ಲಿ ವೈದ್ಯರು, ಸಮಾಜ ಸೇವಕರು, ಕೃಷಿಕರು, ಉದ್ಯಮಿಗಳ ಕುಟುಂಬದವರು ಇದ್ದಾರೆ. ಅವರೆಲ್ಲರೂ ಸಮಾಜಪರವಾಗಿ ದುಡಿದವರು. ಅವರ ನಿಧನದಿಂದ ಅವರ ಕುಟುಂಬ ಮಾತ್ರವಲ್ಲ ಇಡೀ ಸಮಾಜಕ್ಕೆ, ದೇಶಕ್ಕೆ ನಷ್ಟವಾಗಿದೆ. ಅವರ ಕುಟುಂಬದ ಸದಸ್ಯರನ್ನು ಸಂತೈಸುವ ಶಕ್ತಿ ನಮ್ಮಲ್ಲಿಲ್ಲ. ಆದರೆ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವರಿಗೆ ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ.
ಮೃತರಲ್ಲಿ ಬಹುತೇಕ ಮಹಿಳೆಯರು ದಾವಣಗೆರೆ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿನಿಯರಾಗಿದ್ದರು. ಭಾವನಾತ್ಮಕವಾಗಿ ಸಂಬಂಧವನ್ನೂ ಇಟ್ಟುಕೊಂಡಿದ್ದರು. ವಿಶ್ವವಿದ್ಯಾನಿಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ, ಮಾರ್ಗದರ್ಶಕರೂ ಆಗಿದ್ದರು. ಅವರ ಅಗಲಿಕೆ ಬೇಸರ ತಂದಿದೆ. ಮೃತರೆಲ್ಲರಿಗೂ ಭಾವಪೂರ್ಣ ಶ್ರದ್ಧಾಂಜಲಿ ಎಂದಿದ್ದಾರೆ.