ನಾಲ್ಕನೇ ದಿನ ಕ್ರಿಕೆಟ್ ಟೂರ್ನಿಯ ಆಟ ರೋಚಕ

ತೌಫಿಕ್ ಅಹಮದ್ ಹ್ಯಾಟ್ರಿಕ್ ಶತಕ

ದಾವಣಗೆರೆ, ಜ.17- ಮಯೂರ ಕ್ರಿಕೆಟ್ ಕ್ಲಬ್ ಸಂಕ್ರಾಂತಿ ಪ್ರಯುಕ್ತ ಆಯೋಜಿಸಿರುವ 16 ವರ್ಷದ ಒಳಗಿನ ಬಾಲಕರ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆದ ನಾಲ್ಕನೇ ದಿನದ ಆಟ ಹಲವು ರೋಚಕಗಳಿಗೆ ಸಾಕ್ಷಿಯಾಯಿತು.

ದಾವಣಗೆರೆ ಕ್ರಿಕೆಟ್  ಅಕಾಡೆಮಿಯ ಪ್ರತಿಭಾವಂತ ಬ್ಯಾಟ್ಸ್ ಮನ್  ತೌಫಿಕ್ ಅಹಮದ್ ಮತ್ತೊಮ್ಮೆ ನೂರು ರನ್‌ಗಳ ಗಡಿ ದಾಟುವ ಮೂಲಕ  ಹ್ಯಾಟ್ರಿಕ್ ಶತಕಕ್ಕೆ ಭಾಜನರಾದರು.

ಬಾಪೂಜಿ ಎಂಬಿಎ ಕಾಲೇಜಿನ ಟರ್ಫ್ ಅಂಗಳದಲ್ಲಿ ದಿನದ ಕೊನೆಯ ಮತ್ತು ಮೂರನೇ ಪಂದ್ಯದಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿ ಮತ್ತು ಮದಕರಿ ಕ್ರಿಕೆಟ್ ಅಕಾಡೆಮಿ ಚಿತ್ರದುರ್ಗ ಇವರ ಮಧ್ಯೆ ನಡೆದ ಹಣಾಹಣಿಯಲ್ಲಿ ದಾವಣಗೆರೆಯ ಕ್ರಿಕೆಟ್ ಅಕಾಡೆಮಿಯ ಪ್ರತಿಭಾವಂತ ದಾಂಡಿಗ  ತೌಫಿಕ್ 123 ರನ್ನು ಪೇರಿಸುವ ಮೂಲಕ ಟೂರ್ನಿಯಲ್ಲಿ ಸತತ 3 ಶತಕ ಬಾರಿಸಿದ ಕೀರ್ತಿಗೆ ಪಾತ್ರರಾದರು. ಚಿತ್ರದುರ್ಗದ ಪರವಾಗಿ ಪ್ರೀತಂ 50 ರನ್ ಬಾರಿಸಿದರು.

ದಾವಣಗೆರೆ ಕ್ರಿಕೆಟ್ ಅಕಾಡೆಮಿ 3 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿದರು. ಚಿತ್ರದುರ್ಗದ ಬಾಲಕರು 5 ವಿಕೆಟ್‍ಗೆ  124 ಗಳಿಸಿ ಪರಾಭವಗೊಂಡರು. ಇದಕ್ಕೂ ಮೊದಲು ಜಿಲ್ಲಾ ಕ್ರೀಡಾಂಗಣದಲ್ಲಿ ದಾವಣಗೆರೆ ಯುನೈಟೆಡ್‌ ಕ್ರಿಕೆಟ್‌ ಅಕಾಡೆಮಿ ಮತ್ತು ತುಮಕೂರಿನ ಕ್ರಿಕೆಟ್ ಅಕಾಡೆಮಿ ಮಧ್ಯೆ ನಡೆದ ನಾಲ್ಕನೇ ದಿನದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಾವಣಗೆರೆ ಹುಡುಗರು ನಿಗದಿತ 25 ಓವರ್‍ಗಳಲ್ಲಿ 10 ವಿಕೆಟ್ ನಷ್ಟಕ್ಕೆ 118 ರನ್ನುಗಳ ಸಾಧಾರಣ ಮೊತ್ತ ಕಲೆ ಹಾಕಿದರು. ಅಕ್ಷಯ್ 37 ಮತ್ತು ರಕ್ಷಿತ ನಾಯಕ 20 ರನ್ ಬಾರಿಸಿ ತಂಡ ನೂರರ ಗಡಿ ದಾಟುವಂತೆ ನೋಡಿಕೊಂಡರು.

ನಂತರ ಬ್ಯಾಟಿಂಗ್ ನಡೆಸಿದ ತುಮಕೂರು ಕ್ರಿಕೆಟ್ ಅಕಾಡೆಮಿ ಬಾಲಕರು 105 ರನ್ನುಗಳಿಗೆ ಎಲ್ಲ ವಿಕೆಟ್‍ಗಳನ್ನು ಕಳೆದುಕೊಂಡು ಪರಾಭವಗೊಂಡರು. ಮನ್‍ದೀಪ್ 33, ಸೋಹನ್ 30 ರನ್ ಸಿಡಿಸಿದರೂ ಕೂಡ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು.

ಮಾರಕ ಬೌಲಿಂಗ್‍ನ ದಾಳಿ ನಡೆಸಿದ ದಾವಣಗೆರೆ ಯುನೈಟೆಡ್‍ನ ರಿಹಾನ್ ಮಲಿಕ್ 5 ಓವರ್‍ಗಳಲ್ಲಿ 14 ರನ್ ನೀಡಿ 4 ವಿಕೆಟ್ ಕಿತ್ತರು. ತೇಜಸ್ 5 ಓವರ್‍ಗಳಲ್ಲಿ 14 ರನ್ ನೀಡಿ  3 ವಿಕೆಟ್ ಬಾಚಿದರು. ಈ ಮೂಲಕ  ದಾವಣಗೆರೆ ಯುನೈಟೆಡ್ ಹುಡುಗರು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದರು.

ಎಂಬಿಎ ಟರ್ಫ್ ಮೈದಾನದಲ್ಲಿ ದಾವಣ ಗೆರೆ ವೀನಸ್ ಪವರ್ ಮತ್ತು ಬಳ್ಳಾರಿಯ ಡಾ.ಮಸ್ತಿಕರ್ ಕ್ರಿಕೆಟ್ ಅಕಾಡೆಮಿ ನಡುವೆ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ಹುಡುಗರ  ತಂಡ 5 ವಿಕೆಟ್‍ಗಳ ನಷ್ಟಕ್ಕೆ 213 ರನ್ನುಗಳ ಬೃಹತ್ ಮೊತ್ತ ಪೇರಿಸಿದರು. ಈ ಮೊತ್ತ ಬೆನ್ನತ್ತಿದ ದಾವಣಗೆರೆ ವೀನಸ್ ಪವರ್ ಬಾಲಕರು ಕೇವಲ 84 ರನ್ನುಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡರು.

ಶುಭಂ ಸಿಂಗ್ 56, ಮಹೇಂದ್ರ 52 ಮತ್ತು ಲಕ್ಷ್ಮಿಸಾಗರ್ ಅವರ 30 ರನ್ನುಗಳ ಸಹಾಯದಿಂದ ಬಳ್ಳಾರಿ ಬಾಯ್ಸ್ 213 ರನ್ನುಗಳ ಬೃಹತ್ ಮೊತ್ತ ಕಲೆ ಹಾಕಿದರು. ಈ ಗೆಲುವಿನೊಂದಿಗೆ 3 ಅಂಕ ಗಳಿಸಿದ ಬಳ್ಳಾರಿ ತಂಡ ನಾಕೌಟ್ ಹಂತ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಸೋಮವಾರ ಇಂದು ಐದನೇ ದಿನದ ಆಟದಲ್ಲಿ ಬಳ್ಳಾರಿ ಮತ್ತು ದಾವಣಗೆರೆ ಯುನೈಟೆಡ್ ಅಕಾಡೆಮಿ ಮಧ್ಯೆ ನಡೆಯುವ ಅಂತಿಮ ಲೀಗ್ ಪಂದ್ಯದಲ್ಲಿ ಬಳ್ಳಾರಿ ತಂಡ ಗೆದ್ದರೆ ಚಿತ್ರದುರ್ಗ ಮತ್ತು ಬಳ್ಳಾರಿ ತಂಡಗಳ ಅಂಕಗಳು ಸಮನಾಗಲಿವೆ (ತಲಾ 5) ಸರಾಸರಿ ರನ್ ಆಧಾರದ ಮೇಲೆ ಉಭಯ ತಂಡಗಳ ಪೈಕಿ ಒಂದು ತಂಡ ನಾಕೌಟ್ ಹಂತ ಪ್ರವೇಶಿಸಲಿದೆ.

ಟೂರ್ನಿಯಲ್ಲಿ  ಉತ್ತಮ ಪ್ರದರ್ಶನ ತೋರುತ್ತಿರುವ ದಾವಣಗೆರೆ ಕ್ರಿಕೆಟ್‌ ಅಕಾ ಡೆಮಿ, ದಾವಣಗೆರೆ ಯುನೈಟೆಡ್ ಅಕಾಡೆಮಿ ಮತ್ತು ಚಿತ್ರದುರ್ಗ ತಂಡಗಳು ಮುಂದಿನ ಹಂತಕ್ಕೆ ಬರಲು ಮುಂಚೂಣಿಯಲ್ಲಿವೆ. ಸತತ ಸೋಲಿನ ಸುಳಿಗೆ ಸಿಲುಕಿರುವ  ದಾವಣಗೆರೆ ವೀನಸ್ ತಂಡ ಟೂರ್ನಿಯಿಂದ ಹೊರ ಬೀಳುವುದು ಖಚಿತವಾಗಿದೆ.

error: Content is protected !!