ಲಸಿಕೆ: ಪ್ರಜ್ಞೆ ಕಳೆದುಕೊಂಡಿದ್ದ ನರ್ಸ್ ಆರೋಗ್ಯ ಸ್ಥಿತಿ ಸ್ಥಿರ

ಕೊಲ್ಕೊತಾ, ಜ. 17 – ಕೊರೊನಾ ಲಸಿಕೆ ಪಡೆದ ನಂತರ ಅಸ್ವಸ್ಥರಾಗಿದ್ದ ಪಶ್ಚಿಮ ಬಂಗಾಳದ 35 ವರ್ಷದ ಮಹಿಳೆಯ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ. ಲಸಿಕೆ ಪಡೆದ ನಂತರ ಅವರು ಪ್ರಜ್ಞೆ ಕಳೆದುಕೊಂಡ ಬಗ್ಗೆ ಕಾರಣ ತಿಳಿಯಲು ಪರಿಣಿತರ ಮಂಡಳಿಯನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪರಿಣಿತರು ಮಹಿಳೆಯ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ವರದಿ ರೂಪಿಸಲು ಸ್ವಲ್ಪ ಸಮಯ ಬೇಕಾಗ ಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೂ ಆಗಿರುವ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.

ನರ್ಸ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯಕೀಯ ಅಧಿಕಾರಿ ಹೇಳಿದ್ದಾರೆ.

ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್‌ನ ಲಸಿಕೆ ಪರಿಣಿತ ಡಾ. ಶಂತನು ತ್ರಿಪಾಠಿ ಅವರ ಜೊತೆಗೂ ಆರೋಗ್ಯ ಇಲಾಖೆ ಚರ್ಚಿಸುತ್ತಿದೆ ಎಂದವರು ಹೇಳಿದ್ದಾರೆ.

ಶನಿವಾರದಂದು ಲಸಿಕೆ ಪಡೆದು ಅಸ್ವಸ್ಥರಾಗಿದ್ದ ನರ್ಸ್ ಅನ್ನು ಇಲ್ಲಿನ ನೀಲ್ ರತನ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಲಸಿಕೆ ಪಡೆದ ಸ್ವಲ್ಪ ಸಮಯದ ನಂತರ ಅವರು ಬಳಲಿಕೆಗೆ ಗುರಿಯಾಗಿದ್ದರು ಹಾಗೂ ಪ್ರಜ್ಞೆ ತಪ್ಪಿದ್ದರು.

ಬೆಳಿಗ್ಗೆ ನರ್ಸ್‌ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆಕ್ಸಿಜನ್ ಹಾಗೂ ರಕ್ತದೊತ್ತಡ ಸ್ಥಿರವಾಗಿದೆ. ಸದ್ಯಕ್ಕೆ ಆಕ್ಸಿಜನ್ ಆಧಾರವನ್ನು ತೆಗೆಯಲಾಗಿದೆ. ಶೀಘ್ರದಲ್ಲೇ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ ಎಂದು ವೈದ್ಯಕೀಯ ಅಧಿಕಾರಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇದುವರೆಗೂ ಲಸಿಕೆ ಪಡೆದ ನಂತರ 13 ಜನರಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ಆದರೆ, ಈ ಪ್ರಕರಣಗಳು ಗಂಭೀರವಾದವುಗಳಲ್ಲ  ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಹೆಚ್ಚಿನ ರಕ್ತದೊತ್ತಡ ಹಾಗೂ ಜ್ವರದ ಲಕ್ಷಣಗಳು ಕೆಲವರಲ್ಲಿ ಕಂಡು ಬಂದಿವೆ. ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಮನೆಗೆ ಕಳಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

error: Content is protected !!