ಹಗರಿಬೊಮ್ಮನಹಳ್ಳಿ, ಜ.14- ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಹಡಗಲಿ, ಹರಪನಹಳ್ಳಿ ತಾಲ್ಲೂಕಿನ ಮೂಲೆಕಟ್ಟಿನ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಿ ಎಂದು ಹೇಳುವ ಮೂಲಕ ಪಶ್ಚಿಮ ತಾಲ್ಲೂಕಿನ ಹಳ್ಳಿಗಳ 371 ಜೆ ಸೌಲಭ್ಯ ಕಸಿಯುವ ಹುನ್ನಾರ ನಡೆಸಿದ್ದು ಖಂಡನೀಯ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಳ್ಳಾರಿ ನಗರದ ಜನತೆ ಜಿಲ್ಲೆ ರಚನೆಯಾದಾಗಿನಿಂದ ಪಶ್ಚಿಮ ತಾಲ್ಲೂಕುಗಳ ಸಾರ್ವಜನಿಕರ ಗೋಳನ್ನು ಆಲಿಸದೇ ಈಗ ಜಿಲ್ಲೆ ವಿಭಜನೆಯಿಂದ ವ್ಯಾಪಾರ, ವಹಿವಾಟು ಕುಸಿದು ಹೋಗುವ ಭಯದಿಂದ ತೋಳಲಾಡುತ್ತಿರುವುದು ಹಾಸ್ಯಾಸ್ಪದ ಎಂದು ಪತ್ರೇಶ್ ಲೇವಡಿ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆ ಅಖಂಡತೆ ಬಯಸುವ ವಿಭಜನೆ ವಿರೋಧಿ ಹೋರಾಟಗಾರರು ಹಡಗಲಿ ಹರಪನಹಳ್ಳಿ ತಾಲ್ಲೂಕಿನ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಿ ಎನ್ನುವುದು ಅವರ ಸ್ವಾರ್ಥವನ್ನು ಬಹಿರಂಗಗೊಳಿಸಿದಂತಾಗಿದೆ.
ಯಾವುದೇ ಕಾರಣಕ್ಕೂ ಪಶ್ಚಿಮ ತಾಲ್ಲೂಕುಗಳ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಬಾರದು. ಇದರಿಂದ 371 ಜೆ ಸೌಲಭ್ಯ ನಿಂತು ಹೋಗಿ ಹಳ್ಳಿಗಳ ಯುವಕರ ಭವಿಷ್ಯ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.