ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಆಗ್ರಹ

ದಾವಣಗೆರೆ, ಜ.8- ಅತಿಥಿ ಉಪನ್ಯಾಸಕರಿಗೆ ಸೇವಾ  ಭದ್ರತೆ ನೀಡುವಂತೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ರಾಜ್ಯಾಧ್ಯಕ್ಷ ಹೆಚ್.ಕೊಟ್ರೇಶ್,  ರಾಜ್ಯದಲ್ಲಿನ 430 ಸರ್ಕಾರಿ ಪ್ರಥಮ  ದರ್ಜೆ ಕಾಲೇಜುಗಳ 14447 ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಇಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಾಲೇಜುಗಳನ್ನು ಆರಂಭಿಸದ ಹಿನ್ನೆಲೆಯಲ್ಲಿ ಉಪನ್ಯಾಸಕರು ತರಕಾರಿ, ಎಗ್ ರೈಸ್, ಹಣ್ಣು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

2019-20ನೇ ಶೈಕ್ಷಣಿಕ ಸಾಲಿನಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನೇ 2020-21ನೇ ಸಾಲಿಗೆ ಮುಂದುವರೆಸಿ ನೇಮಕಾತಿ ಮಾಡುವಂತೆ ಸರ್ಕಾರ  ಆದೇಶಿಸಿದ್ದರೂ ಅದು ಜಾರಿಯಾಗಿಲ್ಲ. ಕೂಡಲೇ ಈ ಆದೇಶ ಜಾರಿಗೆ ತರಬೇಕು ಎಂದವರು ಒತ್ತಾಯಿಸಿದರು.

ಕೋವಿಡ್ ಮಾರ್ಗಸೂಚಿಯಂತೆ ತರಗತಿಯಲ್ಲಿ 40-45 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿ ಪಾಠ ಮಾಡಬೇಕಾಗಿರುವುದರಿಂದ ಹೆಚ್ಚುವರಿ ಕಾರ್ಯಭಾರಕ್ಕೆ ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳದೆ ಹಾಲಿ ಕಾರ್ಯನಿರತ ಉಪನ್ಯಾಸಕರಿಗೆ ಕಾರ್ಯಭಾರ  ಹಂಚಿಕೆ ಮಾಡಬೇಕು.

ಪ್ರಸ್ತುತ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ರದ್ದುಪಡಿಸಿ ಈ ಹಿಂದೆ ಜೆ.ಓ.ಸಿ. ಉಪನ್ಯಾಸಕರ ಸೇವೆ ಸಕ್ರಮಗೊಳಿಸಿದಂತೆ ಅತಿಥಿ ಉಪನ್ಯಾಸಕರ ಸೇವೆ ಸಕ್ರಮಾತಿಗೆ ಕ್ರಮ ಕೈಗೊಳ್ಳಬೇಕು. 

ಶೀಘ್ರ ಪ್ರಥಮ ಹಾಗೂ ದ್ವಿತೀಯ ವರ್ಷದ  ಭೌತಿಕ ತರಗತಿಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಡಾ.ಟಿ.ಜಿ. ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದ ಬೇರೆ ವಿವಿಗಳಲ್ಲಿ ಈಗಾಗಲೇ ತರಗತಿಗಳು ಆರಂಭವಾಗಿದ್ದು, ದಾವಣಗೆರೆ ವಿವಿಯಲ್ಲಿ ಮಾತ್ರ ತರಗತಿಗಳನ್ನು ಆರಂಭಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಪಿ.ವಿ. ಸಿದ್ದಮ್ಮ, ಅತಿಥಿ ಉಪನ್ಯಾಸಕರಲ್ಲಿ ಮಹಿಳೆಯರೇ ಹೆಚ್ಚಾಗಿದ್ದು,  ಹೆರಿಗೆ ಭತ್ಯೆ, ರಜೆ ಸೌಲಭ್ಯ ಇಲ್ಲವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎ.ಓಬಳೇಶ, ಎ.ಆರ್. ಸತೀಶ್, ಗಂಗಾಧರ ಮೂರ್ತಿ, ಹೆಚ್.ನಿಂಗಪ್ಪ, ಎಂ.ಪ್ರಭಾಕರ್ ಹಾಗು ಇತರರು ಉಪಸ್ಥಿತರಿದ್ದರು.

error: Content is protected !!