ರಸ್ತೆಗಿಂತ ಅಂಗನವಾಡಿ ನಿರ್ಮಾಣಕ್ಕೆ ಆದ್ಯತೆ

ರಸ್ತೆಗಿಂತ ಅಂಗನವಾಡಿ ನಿರ್ಮಾಣಕ್ಕೆ ಆದ್ಯತೆ - Janathavaniದಾವಣಗೆರೆ, ಜ. 7 – ಲೋಕೋಪಯೋಗಿ ಇಲಾಖೆಯ ಎಸ್‌ಸಿಪಿ – ಟಿಎಸ್‌ಪಿ ಅನುದಾನದಲ್ಲಿ ರಸ್ತೆಗಳಿಗಿಂತ ಅಂಗನವಾಡಿ, ಶಾಲೆಗಳು ಹಾಗೂ ಸಮುದಾಯ ಭವನಗಳಂತಹ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಗುರುವಾರ ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ದಾವಣಗೆರೆ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಹಳಷ್ಟು ಇಲಾಖೆಗಳು ರಸ್ತೆ, ಚರಂಡಿ ಕಾಮಗಾರಿಗಳಿಗೆ ಹಣ ನೀಡುವುದರಿಂದ ಕಾಮಗಾರಿಗಳು ಆದ ಕಡೆಯಲ್ಲಿಯೇ ಮತ್ತೆ ಮತ್ತೆ ಆಗುವುದರಿಂದ ಪ್ರಯೋಜನವಿಲ್ಲ ಎಂದವರು ಹೇಳಿದರು. ಲಭ್ಯವಿರುವ ಸ್ಥಳಗಳಲ್ಲಿ ಉದ್ಯೋಗ ಸೃಜನೆಯಾಗುವಂತಹ ಹಾಗೂ ಇಲಾಖೆಗೆ ಶಾಶ್ವತ ಆಸ್ತಿಯಾಗುವಂತಹ ಪುಟ್ಟ ಪುಟ್ಟ ಅಂಗಡಿ, ಮಳಿಗೆಗಳನ್ನು ನಿರುದ್ಯೋಗಿಗಳಿಗೆ ನಿರ್ಮಿಸಿಕೊಟ್ಟಲ್ಲಿ ಅವರಿಗೆ ಉದ್ಯೋಗ ಒದಗಿಸಿದಂತಾಗುತ್ತದೆ ಎಂದರು.

ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ನಾಮಫಲಕಗಳು ಕಂಡು ಬರುತ್ತಿಲ್ಲ. ಇದರಿಂದ ರಾತ್ರಿ ವೇಳೆ ಜನರಿಗೆ ಮಾರ್ಗ ಪತ್ತೆಗೆ ಸಮಸ್ಯೆಯಾಗುತ್ತಿದೆ. ಸ್ಟೀಲ್ ಅಥವಾ ಕಬ್ಬಿಣದ ನಾಮಫಲಕಗಳನ್ನು ಹಾಕುವುದರಿಂದ ಅವುಗಳನ್ನು ಅಪಹರಿಸಿಕೊಂಡು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಿಮೆಂಟಿನ ಅಚ್ಚಿನಲ್ಲಿ ತಯಾರಿಸಿರುವ ನಾಮಫಲಕಗಳನ್ನು ಹಾಕಿದರೆ ಸೂಕ್ತ ಎಂದವರು ತಿಳಿಸಿದರು.

 ಸಾರ್ವಜನಿಕರು ರಸ್ತೆಗಳನ್ನು ಅಗೆಯುವ ಮುನ್ನ ಇಲಾಖೆಯ ವತಿಯಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಅನುಮತಿ ಪಡೆಯದೇ ರಸ್ತೆ ಅಗೆದರೆ ಅಂತಹವರ ವಿರುದ್ದ ಮುಲಾಜಿಲ್ಲದೇ ಮೊಕದ್ದಮೆ ದಾಖಲಿಸಿ ಎಫ್‍ಐಆರ್ ಮಾಡಬೇಕು ಎಂದವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆಯ ರಸ್ತೆಗಳನ್ನು ಒತ್ತುವರಿ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್. ರಾಮಪ್ಪ, ಲಿಡ್ಕರ್ ಅಧ್ಯಕ್ಷರೂ ಆಗಿರುವ ಶಾಸಕ ಪ್ರೊ.ಲಿಂಗಣ್ಣ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ.ಕೃಷ್ಣರೆಡ್ಡಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪಿಡಬ್ಲ್ಯುಡಿ ಮುಖ್ಯ ಅಭಿಯಂತರ ಕಾಂತರಾಜ್, ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

error: Content is protected !!