ಸಂಕಷ್ಟಗಳ ಸರಮಾಲೆ ಎದುರಿಸಿದ ಸರ್ಕಾರ : ಕಾರಜೋಳ

ಸಂಕಷ್ಟಗಳ ಸರಮಾಲೆ ಎದುರಿಸಿದ ಸರ್ಕಾರ : ಕಾರಜೋಳ - Janathavaniಶಾಸಕರ ಅಸಮಾಧಾನಕ್ಕೆ ಸ್ಪಷ್ಟನೆ

ದಾವಣಗೆರೆ, ಜ. 7 – ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಶಾಸಕರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಾಸಕರ ಜೊತೆ ಸಮಾಲೋಚನೆ ನಡೆಸಿದಾಗ, ಸಚಿವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಕಷ್ಟದಲ್ಲೇ ನಡೆದುಕೊಂಡು ಬಂದಿದೆ. ಮೊದಲು ಪ್ರವಾಹ ನಂತರ ಕೊರೊನಾ ಎದುರಾಯಿತು. ಇದರ ನಡುವೆಯೇ ರಾಜ್ಯ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡಿದೆ ಎಂದವರು ಸಮರ್ಥಿಸಿಕೊಂಡಿದ್ದಾರೆ.

ಶಾಸಕರ ಮಾತಿಗೆ ಬೆಲೆ ಕೊಟ್ಟಿಲ್ಲ ಎಂದಲ್ಲ, ಆರ್ಥಿಕ ವ್ಯವಸ್ಥೆ – ಖಜಾನೆ ನೋಡಿಕೊಂಡು ಬೇಡಿಕೆ ಈಡೇರಿಸಬೇಕಾಗುತ್ತದೆ. ಈಗ ಶಾಸಕರ ಸಭೆ ಕರೆದು ಕೆಲಸಗಳಿಗೆ ಚಾಲನೆ ನೀಡಿದ್ದೇವೆ. ಪ್ರತಿ ಶಾಸಕರ ಕ್ಷೇತ್ರಕ್ಕೆ ತಲಾ 25 ಕೋಟಿ ರೂ. ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ನಾಯಕತ್ವ ಬದಲಾವಣೆಯ ಪ್ರಶ್ನೆಯನ್ನು ತಳ್ಳಿ ಹಾಕಿದ ಅವರು, ಯಡಿಯೂರಪ್ಪ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಹೇಳಿದ್ದಾರೆ. ಮುಂದಿನ ಎರಡೂವರೆ ವರ್ಷ ಅವರದೇ ನಾಯಕತ್ವ ಎಂದು ಹೇಳಿದರು.

ಪರಿಷತ್ ಸದಸ್ಯ ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಹಾಗೂ ಸರ್ಕಾರದ ಎದುರು ಅವರ ಬೇಡಿಕೆ ಇದೆ. ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದಿದ್ದಾರೆ.

error: Content is protected !!