ದಾವಣಗೆರೆ, ಜ.6- ಅಭಿವೃದ್ದಿ ಹೆಸರೇಳುತ್ತಾ ಓಟ್ ಬ್ಯಾಂಕ್ ಗೆ ಮಾತ್ರ ತಮ್ಮನ್ನು ಬಳಕೆ ಮಾಡಿಕೊಳ್ಳುತ್ತಾ ಬಂದಿರುವ ಕಾಂಗ್ರೆಸ್ನ ಮೊಸಳೆ ಕಣ್ಣೀರಿನ ನಾಟಕ ದಲಿತರಿಗೆ ಗೊತ್ತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದರು.
ಇಲ್ಲಿನ ಸೋಮೇಶ್ವರ ವಿದ್ಯಾಲಯದಲ್ಲಿ ಇಂದು ಏರ್ಪಾಡಾಗಿದ್ದ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನಾಟಕ ತಿಳಿದ ಅಲ್ಪಸಂಖ್ಯಾತರು, ಹಿಂದುಳಿದವರು ಕಾಂಗ್ರೆಸ್ ಕೈ ಬಿಟ್ಟಿದ್ದಾರೆ. ಬಿಜೆಪಿ ಮೇಲೆ ವಿಶ್ವಾಸ ಬಂದಿದೆ. ಎಸ್ಸಿ ಜನಾಂಗದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪಂಗಡದ ಹೆಸರೇಳಿ ಅವರ ಓಟು ಪಡೆದು, ಮುಂದೆಯೂ ಅವರ ಓಟುಗಳಿಗಾಗಿ ಅವರನ್ನು ಶಿಕ್ಷಣ ವಂಚಿತರನ್ನಾಗಿಯೇ ಮಾಡಿದ್ದು ಕಾಂಗ್ರೆಸ್. ಹಿಂದುಳಿದ ವರ್ಗ ಶಿಕ್ಷಣ ಪಡೆದು ವಿದ್ಯಾವಂತರಾದರೆ, ಉದ್ಯೋಗ ಪಡೆದರೆ ಮುಂದೆ ತಮ್ಮ ಮತ ಬ್ಯಾಂಕ್ ಗೆ ತೊಂದರೆಯಾಗುತ್ತದೆ ಎನ್ನುವ ಮನೋಭಾವದಿಂದ ಕೇವಲ ಆಸೆ ತೋರಿಸುತ್ತಾ ಪರಿಶಿಷ್ಟರಿಗೆ ಅವಮಾನ ಮಾಡುತ್ತಾ ಬಂದಿದೆ ಎಂದರು.
ಆದರೆ ಪ್ರಧಾನಿ ಮೋದಿ 60 ಸಾವಿರ ಕೋಟಿ ರೂ.ಗಳ ವಿದ್ಯಾರ್ಥಿ ವೇತನ ನೀಡಿ ಹಿಂದುಳಿದವರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಹಲವಾರು ಯೋಜನೆಗಳ ಮೂಲಕ ಅವರ ಉದ್ಧಾರಕ್ಕೆ ಶ್ರಮಿಸುತ್ತಿದ್ದಾರೆ ಎಂದರು. ನೀಟ್ ಮೂಲಕ ಎಲ್ಲಾ ವರ್ಗದವರೂ ಮೆಡಿಕಲ್ ಕಾಲೇಜು ಮೆಟ್ಟಿಲು ಹತ್ತಬಹುದು ಎಂದು ರಾಜ್ಯ ಸರ್ಕಾರ ತೋರಿಸಿಕೊಟ್ಟಿದೆ ಎಂದರು.
ಅಸ್ಪೃಶ್ಯತೆಯಿಂದ ನೋವುಂಡಿದ್ದ ಅಂಬೇಡ್ಕರ್ ಎಲ್ಲರಿಗೂ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಸಂವಿಧಾನ ರಚಿಸಿದರು. ಅಂತಹ ಸಂವಿಧಾನದ ಕಾರಣದಿಂದಲೇ ಚಹಾ ಮಾರುವ ಓರ್ವ ಹುಡುಗ ಇಂದು ಪ್ರಧಾನಿಯಾಗಲು ಸಾಧ್ಯವಾಗಿದೆ. ನಮ್ಮಂತ ಅನೇಕರು ರಾಜಕಾರಣಕ್ಕೆ ಬರಲು ಸಾಧ್ಯವಾಗಿದೆ ಎಂದರು.